ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಗೆ ಮತ್ತೊಂದು ಸಂತಸದ ಸುದ್ದಿ ದೊರೆತಿದೆ. ದಕ್ಷಿಣ ಪಶ್ಚಿಮ ರೈಲ್ವೆಯು ಈವರೆಗೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಯಶವಂತಪುರ – ತಾಳಗುಪ್ಪ – ಯಶವಂತಪುರ ರೈಲನ್ನು ಇದೀಗ ಕಾಯಂ ರೈಲಾಗಿ ನಿಯಮಿತ ಸೇವೆಗೆ ನಿಗದಿಪಡಿಸಿದೆ ಎನ್ನಲಾಗುತ್ತಿದೆ.
ರೈಲ್ವೆ ಸಂಖ್ಯೆ 06587/06588 ರೈಲು ಇದುವರೆಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಯಶವಂತಪುರ-ತಾಳಗುಪ್ಪ-ಯಶವಂತಪುರ ಸಂಚರಿಸುತ್ತಿತ್ತು. ಈಗ ಇದನ್ನು ರೈಲು ಗಾಡಿ ಸಂಖ್ಯೆ 16555/16556 ಎಂದು ಮಾರ್ಪಡಿಸಿ, ಯಶವಂತಪುರ – ತಾಳಗುಪ್ಪ – ಯಶವಂತಪುರ ವಾರಕ್ಕೆ ಒಂದು ಸಲ, ಪ್ರತಿ ಶುಕ್ರವಾರದಂದು ಯಶವಂತಪುರದಿಂದ ಹಾಗೂ ತಾಳಗುಪ್ಪದಿಂದ ಪ್ರತಿ ಶನಿವಾರ ಈ ಎಕ್ಸ್ ಪ್ರೆಸ್ ರೈಲು ಖಾಯಂ ಆಗಿ ನಿಯಮಿತ ಸೇವೆ ನೀಡಲಿದೆ. ಈ ಸೇವೆಯು ಇದೇ ಮೇ 15ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ಇದರಿಂದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಲಿದೆ ಎಂದಿದ್ದಾರೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈದ್ಯಕೀಯ ಕಾರಣಗಳಿಗೆ ತೆರಳುವ ಜನರಿಗೆ ಈ ಸೇವೆ ಹೆಚ್ಚಿನ ನೆರವಾಗಲಿದೆ, ಜೊತೆಗೆ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ವ್ಯಕ್ತಪಡಿಸಿದ್ದಾರೆ ಎನ್ನಬಹುದು.
ಆದರಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲ್ವೆ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆಗಳು ಹಾಗೂ ರೈಲು ಸೌಲಭ್ಯಗಳನ್ನು ತರಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ.
















