ಲಕ್ನೋ : ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38 ವರ್ಷ) ಅವರು ಲಕ್ನೋದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರತೀಕ್ ಯಾದವ್ ಅವರನ್ನು ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೃತಪಟ್ಟಿದ್ದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಇವರು ಮುಲಾಯಂ ಸಿಂಗ್ ಯಾದವ್ ಅವರ ದ್ವಿತೀಯ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ ಹಾಗೂ ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಪತಿಯಾಗಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದ ಪ್ರತೀಕ್ ಯಾದವ್ ಅವರು ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದರು. ಲಕ್ನೋದಲ್ಲಿ ರಿಯಲ್ ಎಸ್ಟೇಟ್ ಮತ್ತು ಫಿಟ್‌ನೆಸ್ (ಜಿಮ್) ವ್ಯವಹಾರವನ್ನು ನಡೆಸುತ್ತಿದ್ದರು. ರಾಜಕೀಯ ಕುಟುಂಬದಲ್ಲೇ ಹುಟ್ಟಿ ಬೆಳೆದಿದ್ದರೂ, ಅವರು ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.
ಶಾಲಾ ದಿನಗಳಲ್ಲಿ ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿದ್ದ ಪ್ರತೀಕ್ ಯಾದವ್ ಔಷಧಗಳ ಕಾರಣದಿಂದಾಗಿ 11ನೇ ವಯಸ್ಸಿಗೆ 103 ಕೆಜಿ ತೂಕ ಹೊಂದಿದ್ದರು. ನಂತರ ತಂದೆಯ ಪ್ರೇರಣೆಯಿಂದ ಕಠಿಣ ಶ್ರಮ ಪಟ್ಟು, ತೂಕವನ್ನು 67 ಕೆಜಿಗೆ ಇಳಿಸಿಕೊಂಡು ಬಾಡಿಬಿಲ್ಡರ್ ಆಗಿ ಬದಲಾಗಿದ್ದರು. ಲಕ್ನೋದಲ್ಲಿ ‘ಐರನ್ ಕೋರ್ ಫಿಟ್’ ಮತ್ತು ‘ದಿ ಫಿಟ್‌ನೆಸ್ ಪ್ಲಾನೆಟ್’ ಎಂಬ ಹೈ-ಎಂಡ್ ಜಿಮ್ ಹಾಗೂ ಹೆಲ್ತ್ ಸೆಂಟರ್‌ಗಳನ್ನು ನಡೆಸುವುದರ ಜೊತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಇವರು ಶಾಲಾ ದಿನಗಳ ಸ್ನೇಹಿತೆಯಾಗಿದ್ದ ಅಪರ್ಣಾ ಬಿಸ್ತ್ ಅವರನ್ನು 2011 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ. ಅಪರ್ಣಾ ಯಾದವ್ ಅವರು ಪ್ರಸ್ತುತ ಬಿಜೆಪಿ ನಾಯಕಿಯಾಗಿದ್ದು, ಉತ್ತರ ಪ್ರದೇಶದ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿದ್ದಾರೆ. 2026ರ ಜನವರಿಯಲ್ಲಿ ಪ್ರತೀಕ್ ಯಾದವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿ ಅಪರ್ಣಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಪರ್ಣಾ ಸ್ವಾರ್ಥಿಯಾಗಿದ್ದು, ಪ್ರಸಿದ್ಧಿಗಾಗಿ ಕುಟುಂಬದ ಸಂಬಂಧಗಳನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ತಾವು ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು.
















