ಮನೆ ರಾಜ್ಯ ನಟ ದಿಲೀಪ್ ರಾಜ್ ನೆನೆದು ನಟ ನವೀನ್ ಕೃಷ್ಣ ಭಾವುಕ..!

ನಟ ದಿಲೀಪ್ ರಾಜ್ ನೆನೆದು ನಟ ನವೀನ್ ಕೃಷ್ಣ ಭಾವುಕ..!

0

ಬೆಂಗಳೂರು : ಕನ್ನಡದ ನಟ ಮತ್ತು ನಿರ್ದೇಶಕ ದಿಲೀಪ್ ರಾಜ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಿಲೀಪ್ ರಾಜ್ ಅವರ ಆಪ್ತ ಸ್ನೇಹಿತ, ನಿರ್ದೇಶಕ ಹಾಗೂ ನಟ ನವೀನ್ ಕೃಷ್ಣ ತಮ್ಮ ಗೆಳೆಯನ ಆಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು. ಮಾತನಾಡಿದ ಅವರು, ಕಾಲೇಜು ದಿನಗಳಿಂದಲೇ ನಾವು ಒಳ್ಳೆಯ ಗೆಳೆಯರು. ಒಟ್ಟಿಗೆ ಓದಿದ್ದು, ಡ್ಯಾನ್ಸ್ ಸ್ಪರ್ಧೆಗಳಿಗೆ ಹೋಗುತ್ತಿದ್ದೆವು. ಸ್ನೇಹಿತರಾಗಿ ನಮ್ಮ ಸಿನಿ ಜರ್ನಿ ಆರಂಭವಾಯಿತು. ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದೇವೆ. ದಿಲೀಪ್ ನಮಗೆ ನಿರ್ಮಾಪಕರಾಗಿದ್ದರು. ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಭಾವುಕರಾದರು.

ಕಾಲೇಜು ದಿನಗಳಿಂದಲೂ ಅವರೊಂದಿಗಿದ್ದ ಒಡನಾಟದ ಬಗ್ಗೆ ಹಂಚಿಕೊಂಡ ಅವರು, ಯಾವಾಗಲೂ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಮೂರು ದಿನಗಳ ಹಿಂದೆಯಷ್ಟೇ ಭೇಟಿಯಾಗಿದ್ದೆವು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಮಾಡಿದ ಹಿಟ್ಲರ್ ಪಾತ್ರದಂತೆ ಜೀವನದಲ್ಲೂ ಆರೋಗ್ಯ ಮತ್ತು ಊಟದ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಆದರೆ ಹೃದಯಾಘಾತದಿಂದ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ. ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು.

ಇಂದು ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ತೆಗೆದುಕೊಂಡಿದ್ದರು. ಆದರೆ ಈ ರೀತಿ ಆಗಿಬಿಟ್ಟಿದೆ ಎಂದು ದುಃಖ ವ್ಯಕ್ತಪಡಿಸಿದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ದಿಲೀಪ್ ರಾಜ್ ಮತ್ತೆ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದರು. ಅವರ ಪಾತ್ರಕ್ಕೆ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ಮತ್ತು ಧಾರಾವಾಹಿ ಎರಡರಲ್ಲೂ ನಟ, ನಿರ್ಮಾಪಕರಾಗಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.

2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಚಿತ್ರದ ಮೂಲಕ ನಾಯಕನಾಗಿ ಸಿನಿರಂಗಕ್ಕೆ ಕಾಲಿಟ್ಟ ದಿಲೀಪ್ ರಾಜ್, ನಂತರ ಮಿಲನ ಸಿನಿಮಾದ ವಿಲನ್ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಬಳಿಕ ‘ಸುಗ್ರೀವ’, ‘ಗೆಳೆಯ’, ‘ಯೂಟರ್ನ್’ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ‘ಮನೆಯೊಂದು ಮೂರು ಬಾಗಿಲು’, ‘ರಥಸಪ್ತಮಿ’, ‘ಪ್ರೀತಿಗಾಗಿ’ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಸದ್ಯ ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದರು. ಕೊನೆಯದಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲೂ ನಟಿಸಿದ್ದರು.