ದಕ್ಷಿಣ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಜೀವನದಲ್ಲಿ ನಡೆದ ಒಂದು ವಿಶೇಷ ಅನುಭವವನ್ನು ಹಂಚಿಕೊಂಡಿದ್ದು, ಅದು ತಮ್ಮ ಅಹಂಕಾರವನ್ನು ಸಂಪೂರ್ಣವಾಗಿ ಪುಡಿಪುಡಿಯಾಗಿಸಿತು ಎಂದು ಹೇಳಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಎಲ್ಲಿಗೆ ಹೋದರೂ ಜನರು ಸುತ್ತುವರಿದು ಫೋಟೋ, ಸೆಲ್ಫಿ ಮತ್ತು ಆಟೋಗ್ರಾಫ್ ಕೇಳುವುದು ಸಾಮಾನ್ಯ. ಆದರೆ, ಒಂದು ಸ್ಥಳದಲ್ಲಿ ತಾವು ಕೈ ಬೀಸುತ್ತಿದ್ದರೂ ಯಾರೂ ಗಮನಿಸದ ಘಟನೆ ತಮ್ಮ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು ಎಂದು ಅವರು ಬಹಿರಂಗಪಡಿಸಿದ್ದಾರೆ.
ಮಂಗಳವಾರ ನಡೆದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥೆಯ 45ನೇ ವರ್ಷದ ಆಚರಣೆ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರಜನಿಕಾಂತ್ ಈ ವಿಚಾರವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿಕೊಂಡರು.
ಆಶ್ರಮದ ಪ್ರವಾಸ ಕೈಗೊಳ್ಳಲು ಬಯಸುತ್ತೀರಾ ಎಂದು ಶ್ರೀ ಶ್ರೀ ರವಿಶಂಕರ್ ಕೇಳಿದಾಗ, ನಾನು ಮೊದಲು ನಿರಾಕರಿಸಿದ್ದೆ ಎಂದು ರಜನಿಕಾಂತ್ ಹೇಳಿದರು. “ನಾನು ಜನಪ್ರಿಯ ನಟನಾಗಿರುವುದರಿಂದ ಜನರು ನನ್ನ ಸುತ್ತ ಸೇರಬಹುದು, ಫೋಟೋ ಕೇಳಬಹುದು, ಆಟೋಗ್ರಾಫ್ ಕೇಳಬಹುದು ಎಂಬ ಭಾವನೆ ನನ್ನಲ್ಲಿತ್ತು. ಇದರಿಂದ ಆಶ್ರಮದಲ್ಲಿ ತೊಂದರೆ ಉಂಟಾಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಗುರುದೇವರು ‘ಯಾವುದೇ ತೊಂದರೆ ಆಗುವುದಿಲ್ಲ, ಬನ್ನಿ’ ಎಂದು ಹೇಳಿದರು” ಎಂದು ಅವರು ತಿಳಿಸಿದರು.
ಆ ನಂತರ ಆಶ್ರಮದ ಆವರಣದಲ್ಲಿ ನಡೆದ ಸಂದರ್ಭವನ್ನು ವಿವರಿಸಿದ ರಜನಿಕಾಂತ್, “ಅಲ್ಲಿ ಸಾವಿರಾರು ಜನರು ಇದ್ದರು. ತಮಿಳುನಾಡಿನಿಂದ ಬಂದವರನ್ನೂ ನೋಡಿದೆ. ಜನರು ನನ್ನನ್ನು ಗುರುತಿಸುತ್ತಾರೆ, ನನ್ನ ಹೆಸರು ಕೂಗುತ್ತಾರೆ, ಫೋಟೋ ಕೇಳುತ್ತಾರೆ ಎಂದು ನಾನು ಊಹಿಸಿದ್ದೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಒಬ್ಬ ವ್ಯಕ್ತಿಯೂ ನನ್ನತ್ತ ನೋಡಲಿಲ್ಲ. ಫೋಟೋ ಅಥವಾ ಆಟೋಗ್ರಾಫ್ ಕೇಳುವುದನ್ನು ಬಿಡಿ, ಯಾರೂ ನನ್ನ ಜೊತೆ ಮಾತನಾಡಲಿಲ್ಲ. ನಾನು ಕೈ ಬೀಸುತ್ತಿದ್ದೆ, ಆದರೆ ಯಾರೂ ನನ್ನತ್ತ ನೋಡಲಿಲ್ಲ” ಎಂದು ಹೇಳಿದರು.
ಈ ಅನುಭವ ತನ್ನ ಅಹಂಕಾರವನ್ನು ಸಂಪೂರ್ಣವಾಗಿ ಮುರಿದು ಹಾಕಿತು ಎಂದು ರಜನಿಕಾಂತ್ ಹೇಳಿದ್ದಾರೆ. “ನಾನು ಅನೇಕ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿದ್ದೇನೆ. ಆದರೆ ಈ ಘಟನೆಯು ನನ್ನ ಮನಸ್ಸಿನ ಮೇಲೆ ತುಂಬಾ ಆಳವಾದ ಪರಿಣಾಮ ಬೀರಿತು. ಆಧ್ಯಾತ್ಮಿಕ ಶಕ್ತಿ ಎಷ್ಟು ಪ್ರಬಲವಾಗಿರುತ್ತದೆ ಎಂಬುದು ನನಗೆ ಅಲ್ಲಿ ಅರ್ಥವಾಯಿತು” ಎಂದು ಅವರು ಹೇಳಿದರು.
ಆಶ್ರಮದ ಶಾಂತ ವಾತಾವರಣ ಮತ್ತು ಅಲ್ಲಿನ ಆಧ್ಯಾತ್ಮಿಕ ಶಕ್ತಿಯು ತಮ್ಮ ಆಲೋಚನೆಗಳು ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ. “ಗುರುದೇವರು ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದರು. ಆದರೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆ ಅನುಭವ ನನಗೆ ದೊಡ್ಡ ಪಾಠ ಕಲಿಸಿತು” ಎಂದು ರಜನಿಕಾಂತ್ ಹೇಳಿದರು.
ಚಿತ್ರರಂಗದ ವಿಚಾರಕ್ಕೆ ಬಂದರೆ, ರಜನಿಕಾಂತ್ ಕೊನೆಯದಾಗಿ ‘ಕೂಲಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ‘ಜೈಲರ್ 2’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಮಲ್ ಹಾಸನ್ ಅವರೊಂದಿಗಿನ ಮತ್ತೊಂದು ಸಿನಿಮಾದಲ್ಲೂ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಎಸ್.ಜೆ. ಸೂರ್ಯ, ಯೋಗಿ ಬಾಬು, ಮಿರ್ನಾ, ಅನ್ನಾ ರಾಜನ್, ಜತಿನ್ ಸರ್ನಾ, ಸೂರಜ್ ವೆಂಜರಮೂಡು ಮತ್ತು ವಿದ್ಯಾ ಬಾಲನ್ ಕೂಡ ಅಭಿನಯಿಸುತ್ತಿದ್ದಾರೆ.
ಇದಲ್ಲದೆ ಮೋಹನ್‌ಲಾಲ್, ಮಿಥುನ್ ಚಕ್ರವರ್ತಿ, ವಿಜಯ್ ಸೇತುಪತಿ ಮತ್ತು ಶಿವ ರಾಜಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಜೂನ್ 12 ರಂದು ಬಿಡುಗಡೆಯಾಗಲಿದೆ.

















