ಮನೆ ಸುದ್ದಿ ಜಾಲ ಚಂಡಮಾರುತ ಆರ್ಭಟದಿಂದ, ತಗಡಿನ ಶೆಡ್ ಸಮೇತ ಹಾರಿಹೋಗಿ 300 ಮೀಟರ್ ದೂರ ಬಿದ್ದ ವ್ಯಕ್ತಿ : ...

ಚಂಡಮಾರುತ ಆರ್ಭಟದಿಂದ, ತಗಡಿನ ಶೆಡ್ ಸಮೇತ ಹಾರಿಹೋಗಿ 300 ಮೀಟರ್ ದೂರ ಬಿದ್ದ ವ್ಯಕ್ತಿ :  ಯುಪಿ

0

ಮಾನ್ಸೂನ್‌ ಆರಂಭಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಭಾರೀ ಹವಾಮಾನ ವೈಪರೀತ್ಯ ಉಂಟಾಗಿದೆ. ರಾಜ್ಯದ ಹಲವು ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದೆ. ಬಿರುಗಾಳಿ, ಸಿಡಿಲು ಹಾಗೂ ಅತೀವ ಮಳೆಯ ಪರಿಣಾಮವಾಗಿ ವ್ಯಾಪಕ ಹಾನಿ ಸಂಭವಿಸಿದ್ದು, ಕನಿಷ್ಠ 89 ಜನರು ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಪ್ರಯಾಗ್‌ರಾಜ್‌, ಭದೋಹಿ, ಫತೇಪುರ್‌ ಹಾಗೂ ಸೋನ್‌ಭದ್ರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಬಲವಾದ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಮರಗಳು, ಮನೆಗಳ ಗೋಡೆಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್‌ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಬರೇಲಿ ಜಿಲ್ಲೆಯಲ್ಲಿ ಭೀಕರ ಚಂಡಮಾರುತಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ತಗಡಿನ ಶೆಡ್‌ ಸಮೇತ ಗಾಳಿಯಲ್ಲಿ ಹಾರಿ ಹೋಗುತ್ತಿರುವ ದೃಶ್ಯಗಳು ವೈರಲ್‌ ಆಗಿವೆ. ನಾನ್ಹೆ ಮಿಯಾನ್ ಎಂದು ಗುರುತಿಸಲಾದ ಆ ವ್ಯಕ್ತಿ ನೆಲಕ್ಕೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಈತ ಬಬಿಯಾನಾ ಗ್ರಾಮದ ನಿವಾಸಿ ವಾಹಿದ್ ಅನ್ಸಾರಿ ಅವರ ಪುತ್ರನಾಗಿದ್ದು, ಸುಮಾರು 50 ವರ್ಷ ವಯಸ್ಸಿನವರು. ಈ ಘಟನೆ ಬರೇಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಮಿಯಾನಾ ಗ್ರಾಮದಲ್ಲಿ ನಡೆದಿದೆ. ಈ ವೀಡಿಯೊ ಚಂಡಮಾರುತದ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ಜನರಲ್ಲಿ ಭಯ ಮತ್ತು ಆತಂಕ ಹೆಚ್ಚಿಸಿದೆ. ಚಂಡಮಾರುತದ ಸಮಯದಲ್ಲಿ ಗ್ರಾಮದ ಸಮುದಾಯ ಭವನದ ಬಳಿ ಆಶ್ರಯ ಪಡೆಯಲು ನಾನ್ಹೆ ನಿಂತಿದ್ದನು.ಬಲವಾದ ಗಾಳಿಯಿಂದ ತಪ್ಪಿಸಿಕೊಳ್ಳಲು ಅಲ್ಲಿದ್ದ ಪೈಪ್‌ಗಳನ್ನು ಹಿಡಿದುಕೊಂಡಿದ್ದನು. ಆದರೆ ಗಾಳಿಯ ವೇಗ ಅತೀವವಾಗಿದ್ದರಿಂದ ಸಮುದಾಯ ಭವನದ ಮೇಲ್ಛಾವಣಿಯ ತಗಡುಗಳು ಹಾರಿಹೋಗಿ, ಅವುಗಳೊಂದಿಗೆ ನಾನ್ಹೆಯೂ ಗಾಳಿಯಲ್ಲಿ ತೇಲಿ ಹೋಗಿದ್ದಾನೆ. ಸುಮಾರು 300 ಮೀಟರ್‌ ದೂರದ ಹೊಲವೊಂದರಲ್ಲಿ ಬಿದ್ದ ಪರಿಣಾಮ ಅವನಿಗೆ ಗಂಭೀರ ಗಾಯಗಳಾಗಿದ್ದು, ಕೈ-ಕಾಲುಗಳು ಮುರಿದಿವೆ. ಪ್ರಸ್ತುತ ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪ್ರಾಣಕ್ಕೇನು ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಆದರೆ ಅದು 30-40 ಅಡಿ ಎತ್ತರವಿತ್ತು. ನಾನು ಎಲ್ಲಿ ಬಿದ್ದೆನೋ ನನಗೆ ತಿಳಿದಿಲ್ಲ. ನಾನು ಕನಿಷ್ಠ 50 ಅಡಿ ದೂರದಲ್ಲಿದ್ದೆ ಶೆಡ್ ತಮ್ಮನ್ನು ಸುರಕ್ಷಿತವಾಗಿಡುತ್ತದೆ ಎಂಬ ನಂಬಿಕೆಯೊಂದಿಗೆ ಹಗ್ಗವನ್ನು ಹಿಡಿದಿದ್ದೆ ಆದರೆ ಬಲವಾದ ಗಾಳಿ ಹಗ್ಗವನ್ನು ತುಂಡರಿಸಿಬಿಟ್ಟಿತು. ಮತ್ತೆನಾಯ್ತು ನನಗೆ ಗೊತ್ತಾಗಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಉಂಟಾದ ಈ ವಿಪರೀತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಡಳಿತವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ಪ್ರಾರಂಭಿಸಲಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಅವಶ್ಯಕ ನೆರವು ಒದಗಿಸಲು ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆದರಿಂದ ಸಂತ್ರಸ್ತರಿಗೆ 24 ಗಂಟೆಗಳ ಒಳಗೆ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿರುವ ಅವರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಸ್ವತಃ ಸ್ಥಳದಲ್ಲಿದ್ದು ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಪ್ರತಿ ಜಿಲ್ಲೆಯ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಯಾವುದೇ ರೀತಿಯ ವಿಳಂಬವಿಲ್ಲದೆ ನೆರವು ತಲುಪಿಸುವುದಕ್ಕೆ ಒತ್ತಾಯಿಸಿದೆ. ರಕ್ಷಣಾ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಕಾರ್ಯ ನಿರಂತರವಾಗಿ ಮುಂದುವರಿದಿದೆ ಎನ್ನಲಾಗಿದೆ.