ಮನೆ ಸುದ್ದಿ ಜಾಲ KSRTC-BMTC Strike: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ‘ನೋ ವರ್ಕ್ ನೋ ಪೇ’...

KSRTC-BMTC Strike: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ‘ನೋ ವರ್ಕ್ ನೋ ಪೇ’ ಜಾರಿಗೆ ಸರ್ಕಾರ ಸಿದ್ಧ, ಸಿಬ್ಬಂದಿಗೆ ಖಡಕ್ ವಾರ್ನಿಂಗ್..!

0

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೆ ಮುಷ್ಕರದ ಭೀತಿ ಎದುರಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಸಾರಿಗೆ ನೌಕರರ ಒಕ್ಕೂಟಗಳು ಜಂಟಿಯಾಗಿ ಪ್ರತಿಭಟನೆ ಹಾಗೂ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಲಕ್ಷಾಂತರ ಪ್ರಯಾಣಿಕರು ಸಂಕಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಸಾರಿಗೆ ನೌಕರರು ಪ್ರಮುಖವಾಗಿ ಶೇ 25ರ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯಿಸಿದ್ದು, ಕಳೆದ 38 ತಿಂಗಳ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಈಗಾಗಲೇ ಶೇ 12.5ರ ವೇತನ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಿದ್ದು, 26 ತಿಂಗಳ ವೇತನ ಹಿಂಬಾಕಿಯ ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೂ ಸರ್ಕಾರದ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ನೌಕರರು ತಮ್ಮ ಬೇಡಿಕೆಗಳು ಸಂಪೂರ್ಣ ಈಡೇರದವರೆಗೆ ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಷ್ಕರ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಕಠಿಣ ನಿಲುವು ತೆಗೆದುಕೊಂಡಿದೆ. ಮೇ 20ರಂದು ಯಾವುದೇ ಕಾರಣಕ್ಕೂ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವಂತೆಯೂ ಇಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಬುಧವಾರ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ‘ನೋ ವರ್ಕ್ ನೋ ಪೇ’ ನಿಯಮ ಅನ್ವಯಿಸಲಾಗುವುದು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮುಷ್ಕರದ ಪರಿಣಾಮ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ. ಸಿಬ್ಬಂದಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು. ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಗತ್ಯ ಪರಿಸ್ಥಿತಿಯಲ್ಲಿ ನೌಕರರ ವಾರದ ರಜೆ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ ಸಂಚಾರವನ್ನು ಸಾಧ್ಯವಾದಷ್ಟು ನಿರಂತರವಾಗಿ ನಡೆಸುವತ್ತ ಸರ್ಕಾರ ಗಮನ ಹರಿಸಿದೆ.

ಇನ್ನು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ನೀಡಿರುವ ಮುಷ್ಕರ ನೋಟಿಸ್ ಸಂಬಂಧಪಟ್ಟ ವಿಚಾರವು ಸದ್ಯ ರಾಜ್ಯ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನ ಹಂತದಲ್ಲಿದೆ. ಕೈಗಾರಿಕಾ ವಿವಾದಗಳ ಕಾಯಿದೆ-1947 ಅನ್ವಯ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಗಳ ನೌಕರರು ರಾಜೀ ಸಂಧಾನ ನಡೆಯುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂಬ ನಿಯಮವೂ ಜಾರಿಯಲ್ಲಿದೆ.

ಈ ಕಾರಣದಿಂದ ನಿಗಮದ ನೌಕರರು ಯಾವುದೇ ಕಾರಣಕ್ಕೂ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ಪ್ರತಿದಿನದ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ವಿಶ್ವಾಸ ಉಳಿಸಬೇಕು ಎಂದು ತಿಳಿಸಲಾಗಿದೆ. ವಿಶೇಷ ಸೂಚನೆಗಳ ನಡುವೆಯೂ ಕರ್ತವ್ಯಕ್ಕೆ ಗೈರಾಗುವ ನೌಕರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಮತ್ತು ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿವೆ.