ಮನೆ ರಾಷ್ಟ್ರೀಯ ತೀರದ ವರದಕ್ಷಿಣೆ ದಾಹ – ಪತಿಯ ಕಿರುಕುಳಕ್ಕೆ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ..!

ತೀರದ ವರದಕ್ಷಿಣೆ ದಾಹ – ಪತಿಯ ಕಿರುಕುಳಕ್ಕೆ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ..!

0

ಲಕ್ನೋ : ಮದುವೆ ವೇಳೆ ಸ್ಕಾರ್ಪಿಯೋ ಕಾರು ಹಾಗೂ 1 ಕೋಟಿ ರೂ. ಮೌಲ್ಯದ ಚಿನ್ನ ಕೊಟ್ಟರು ಪತಿ ಹಾಗೂ ಕುಟುಂಬಸ್ಥರು ಹೆಚ್ಚುವರಿ ಹಣಕ್ಕಾಗಿ ಕಿರುಕುಳ ನೀಡಿದ್ದಕ್ಕೆ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ದೀಪಿಕಾ ನಗರ್ (24) ಎಂದು ಗುರುತಿಸಲಾಗಿದೆ.

14 ತಿಂಗಳ ಹಿಂದಷ್ಟೇ ಅವರ ವಿವಾಹವಾಗಿತ್ತು. ಮದುವೆ ವೇಳೆ ಸ್ಕಾರ್ಪಿಯೋ ಕಾರು ಹಾಗೂ 1 ಕೋಟಿ ರೂ. ಮೌಲ್ಯದ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಸಹ ಪತಿ ರಿತಿಕ್‌ ಮತ್ತು ಅತ್ತೆ ಮಾವ ಹೆಚ್ಚುವರಿ 50 ಲಕ್ಷ ರೂ. ಹಣ ಹಾಗೂ ಫಾರ್ಚೂನರ್ ಎಸ್‌ಯುವಿಗಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಈಗ ಆಕೆಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಮೃತ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ ದೂರಿನ ಆಧಾರದ ಮೇಲೆ ಇಕೋಟೆಕ್ -3 ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ರಿತಿಕ್ ಮತ್ತು ಮಾವ ಮನೋಜ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ರಿತಿಕ್ ಮನೆಯ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.