ಭಾರತವನ್ನು ಪ್ರತಿನಿಧಿಸಲು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐಗೆ ಇರುವ ನಿಯಮಗಳು ಮತ್ತು ಅಧಿಕಾರಗಳ ಬಗ್ಗೆ ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ವಜಾಗೊಳಿಸಿದೆ. ಕಳೆದ 2018ರಲ್ಲಿ ಆಗಿನ ಮಾಹಿತಿ ಆಯುಕ್ತ ಎಂ. ಶ್ರೀಧರ್ ಆಚಾರ್ಯುಲು ಅವರು ಬಿಸಿಸಿಐ “ಸಾರ್ವಜನಿಕ ಪ್ರಾಧಿಕಾರ” ಎಂದು ಪ್ರತಿಪಾದಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ನೇಮಿಸಲು ಮಂಡಳಿಗೆ ನಿರ್ದೇಶನ ನೀಡಿದ್ದರು. ಬಿಸಿಸಿಐ ಈ ನಿರ್ದೇಶನವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಸುಪ್ರೀಂ ಕೋರ್ಟ್ ನೀಡಿದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ಮದ್ರಾಸ್ ಹೈಕೋರ್ಟ್ ಈ ವಿಷಯದ ಬಗ್ಗೆ ಹೊಸ ವಿಚಾರಣೆ ನಡೆಸುವಂತೆ ಕೇಂದ್ರ ಮಾಹಿತಿ ಆಯೋಗಕ್ಕೆ ನಿರ್ದೇಶನ ನೀಡಿತು ಎನ್ನಬಹುದು.
ಅದರಂತೆ ಈ ಕುರಿತು ವಿಚಾರಣೆ ನಡೆಸಿದ ಆಯೋಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಬಿಸಿಸಿಐ ಸರ್ಕಾರದ ಒಡೆತನದಲ್ಲಿಲ್ಲ ಅಥವಾ ಸರ್ಕಾರದ ನಿಯಂತ್ರಣದಲ್ಲಿಲ್ಲ ಮತ್ತು ಅದು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯವನ್ನು ಪಡೆಯುತ್ತಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ ಸ್ಪಷ್ಟಪಡಿಸಿದೆ. ಪರಿಣಾಮವಾಗಿ, ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದೆ. ಮಾಹಿತಿ ಆಯುಕ್ತ ಪಿ.ಆರ್. ರಮೇಶ್ ತಮ್ಮ ಆದೇಶದಲ್ಲಿ, “ಬಿಸಿಸಿಐ ಅನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಪ್ರಾಧಿಕಾರ ಎಂದು ಪರಿಗಣಿಸಲಾಗುವುದಿಲ್ಲ. ಬಿಸಿಸಿಐ ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದೆ. ಇದನ್ನು ಸಂವಿಧಾನ ಅಥವಾ ಸಂಸತ್ತು ಜಾರಿಗೆ ತಂದ ಯಾವುದೇ ಕಾಯ್ದೆಯಿಂದ ಸ್ಥಾಪಿಸಲಾಗಿಲ್ಲ. ಇದು ಸರ್ಕಾರಿ ಮಾಲೀಕತ್ವದಲ್ಲಿಲ್ಲ ಅಥವಾ ಸರ್ಕಾರದ ನಿಯಂತ್ರಣದಲ್ಲಿಲ್ಲ. ಇದಲ್ಲದೇ, ಇದು ಸರ್ಕಾರದಿಂದ ಯಾವುದೇ ಹಣಕಾಸಿನ ನೆರವನ್ನೂ ಪಡೆಯುತ್ತಿಲ್ಲ. ಆದ್ದರಿಂದ, ಇದನ್ನು ‘ಸಾರ್ವಜನಿಕ ಪ್ರಾಧಿಕಾರ’ ಎಂದು ವರ್ಗೀಕರಿಸಲಾಗುವುದಿಲ್ಲ” ಎಂದು ತಿಳಿಸಿದ್ದಾರೆ ಎನ್ನಬಹುದು.
ಭಾರತದ ಕ್ರೀಡಾ ಸಚಿವಾಲಯಕ್ಕೆ ಆರ್‌ಟಿಐ ಅರ್ಜಿ ಬಂದಿತ್ತು. ಬಿಸಿಸಿಐ ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರದ ಕಾರಣ, ಇದರ ಬಗ್ಗೆ ಕೋರಿದ ಮಾಹಿತಿ ತನ್ನ ಬಳಿ ಇಲ್ಲ ಮತ್ತು ಅದನ್ನು ಬಿಸಿಸಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ಉತ್ತರಿಸಿತ್ತು. ಇದಾದ ನಂತರ, ವಿಷಯ ಮುಂದಕ್ಕೆ ಸಾಗಿತು. ಈ ಆದೇಶದ ಬೆನ್ನಲ್ಲೇ ಬಿಸಿಸಿಐ ಇನ್ನು ಮುಂದೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಒದಗಿಸಲು ಬಾಧ್ಯಸ್ಥವಾಗಿರುವುದಿಲ್ಲ. ಈ ನಿರ್ಧಾರವು ಭಾರತೀಯ ಕ್ರಿಕೆಟ್ ಮಂಡಳಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ ಏಕೆಂದರೆ ಇದು ಬಿಸಿಸಿಐನ ಸ್ವಾಯತ್ತತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಆದಾಗ್ಯೂ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕುರಿತು ಚರ್ಚೆ ಮತ್ತೊಮ್ಮೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
















