ದರ್ಭಂಗಾ: ಬಿಹಾರದ ದರ್ಭಂಗಾ ಜಿಲ್ಲೆಯ ಪಾಟೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನ್ಪಟ್ಟಿ ಗ್ರಾಮದ ಇಡೀ ಪ್ರದೇಶವನ್ನು ಮಂಗಳವಾರ ಬೆಳಗ್ಗೆ ಒಂದು ಭಯಾನಕ ಘಟನೆ ಬೆಚ್ಚಿಬೀಳಿಸಿದೆ. ಮಾನಸಿಕವಾಗಿ ಕುಗ್ಗಿದ ಪತಿ ಸಂದೀಪ್ ದಾಸ್ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಮೇಲೆ ಕೋಲು ಮತ್ತು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಪಶ್ಚಿಮ ಬಂಗಾಳದ ದಾಲ್ಕೋಲಾ ಜಿಲ್ಲೆಯ ಕುಂಡಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಫೂಲ್ ಕುಮಾರಿ ದಾಸ್ (30), ಆಕೆಯ ಮಗ ಹೃದಯ್ ದಾಸ್ (7), ಮಗಳು ಸಂಧ್ಯಾ ದಾಸ್ (6) ಮತ್ತು ಇನ್ನೊಬ್ಬ ಮಗ ಸೋನ್ ದಾಸ್ (5) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮಗ ದಾಸ್ನನ್ನು ದರ್ಭಂಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವನು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಇಡೀ ಕುಟುಂಬ ಚಂದನ್ಪಟ್ಟಿಯಲ್ಲಿರುವ ಕೋಳಿ ಸಾಕಣೆ ಕೇಂದ್ರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ, ಪತಿ ಮತ್ತು ಪತ್ನಿಯ ನಡುವೆ ಕ್ಷುಲ್ಲಕ ವಿಷಯಕ್ಕೆ ಜಗಳವಾಗಿದೆ. ಈ ವೇಳೆ ಸಂದೀಪ್ ದಾಸ್ ಅವರು ಕೋಪಗೊಂಡು, ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ಸುದ್ದಿ ಹರಡಿದ ತಕ್ಷಣ, ಸ್ಥಳೀಯ ನಿವಾಸಿಗಳು ಆಘಾತಕ್ಕೊಳಗಾಗಿದ್ದಾರೆ. ಹಾಗೂ ದಾಳಿಯ ನಂತರ ಸಂದೀಪ್ ದಾಸ್ ಕೂಡ ಗಾಯಗೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಡಿಎಂಸಿಹೆಚ್ಗೆ ಕಳುಹಿಸಲಾಗಿದೆ. ಎಫ್ಎಸ್ಎಲ್ ತಂಡವನ್ನು ಸಹ ಕರೆಯಲಾಗಿದ್ದು, ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಮೃತ ಫೂಲ್ ಕುಮಾರಿಯ ಸಹೋದರ ಮಂಗು ದಾಸ್ ಅವರು ಈ ಕುರಿತು ಮಾತನಾಡಿದ್ದು, ‘ಆ ದಿನ ಬೆಳಗ್ಗೆ ಇಬ್ಬರ ನಡುವೆ ಜಗಳವಾಯಿತು, ನಂತರ ಸಂದೀಪ್ ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿದನು. ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದರು. ಇಡೀ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದಿದ್ದಾರೆ ಎನ್ನಲಾಗಿದೆ.
















