ಬೆಂಗಳೂರು : ರೈತರ ಸಮಾಧಿ ಮೇಲೆ ಈ ಸರ್ಕಾರ ಪ್ರದರ್ಶನ ಮಾಡುತ್ತಿದೆ ಎಂದು ಸರ್ಕಾರದ ಸಾಧನಾ ಸಮಾವೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಸಮರ್ಪಣಾ ಸಮಾವೇಶ ಮಾಡುತ್ತಿದ್ದಾರೆ. ಕಳೆದ ವರ್ಷವೂ ಸಮಾವೇಶ ಮಾಡಿದ್ರು. ಬಣ್ಣ ಬಣ್ಣದ ಚಿತ್ರ ಹಾಕಿ ಪ್ರಚಾರ ಮಾಡಿದ್ದಾರೆ. 1.54 ಲಕ್ಷ ಹಕ್ಕು ಪತ್ರ ವಿತರಣೆ ಮಾಡುತ್ತೇನೆ ಅಂದಿದ್ದಾರೆ. ಕಳೆದ ವರ್ಷವೂ ಇದೆ ಮಾಡಿದ್ದಾರೆ.
ಪ್ರತಿನಿತ್ಯ ಪ್ರಚಾರ ಮಾಡೋದು ನೋಡಿದ್ದೇವೆ. ನಮ್ಮ ಹತ್ರ ಮತ್ತು ಜಿಲ್ಲಾ ಕೇಂದ್ರಗಳಿಗೆ ಜನ ಅರ್ಜಿಗಾಗಿ ಅಲೆಯುತ್ತಿದ್ದಾರೆ. ಜಾಹೀರಾತು ಕೊಡೋದು ನೋಡಿದರೆ ಯಾರು ಮಾಡದೇ ಇರೋದು ಮಾಡಿದ್ದೀವಿ ಅಂತ ಕೊಡುತ್ತಿದ್ದಾರೆ. ಅದೇನೋ 6ನೇ ಭೂ ಗ್ಯಾರಂಟಿ ಕೊಡ್ತಾ ಇದ್ದೀನಿ ಅಂತಿದ್ದಾರೆ ಎಂದು ಕಿಡಿಕಾರಿದರು. ಸಚಿವರೊಬ್ಬರು ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಅಂತಾರೆ.
ಎನ್ಸಿಆರ್ ಎಂಬ ಸಂಸ್ಥೆ ಸರ್ವೆ ಪ್ರಕಾರ 2023ರಲ್ಲಿ 2,400 ರೈತರ ಆತ್ಮಹತ್ಯೆ, 2024ರಲ್ಲಿ 2,900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ಪ್ರಕರಣವನ್ನ ಜಾಣತನದಿಂದ ಈ ಸರ್ಕಾರ ಮುಚ್ಚಿಟ್ಟಿದ್ದಾರೆ. ಎರಡು ವರ್ಷಗಳಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅವರ ಸಾಧನೆ. ರೈತರ ಆತ್ಮಹತ್ಯೆ ದಾಖಲೆಗಳನ್ನು ಸಮರ್ಪಣೆ ಮಾಡಲು ಇವರು ತುಮಕೂರಿಗೆ ಹೋಗಿದ್ದಾರಾ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ವಿಷಯಗಳನ್ನು ಮುಚ್ಚಿಡಲು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಏನಾಗಿದೆ. ನಿನ್ನೆ 10 ನಿಮಿಷ ಮಳೆ ಬಂದಿದ್ದಕ್ಕೆ ಹಲವಾರು ಭಾಗದಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಈ ಸಮಾವೇಶಕ್ಕೆ ಕೊಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಸಮಾವೇಶಕ್ಕೆ ಜನರನ್ನು ಕರೆಸೋಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಇವರು ಕಾರ್ಯಕ್ರಮ ಮಾಡಿದ್ರೆ ಜನ ಬರಲ್ಲ. ಅದಕ್ಕಾಗಿ ಅಧಿಕಾರಿಗಳ ಮೂಲಕ ಜನ ಸರ್ಕಾರದ ದುಡ್ಡಲ್ಲಿ ತರಿಸುತ್ತಿದ್ದಾರೆ. ರೈತರ ಸಮಾಧಿ ಮೇಲೆ ಈ ಸರ್ಕಾರ ಈ ಪ್ರದರ್ಶನ ಮಾಡಿದ್ದಾರೆ. ಇದು ಖಂಡನೀಯ ಅಂತ ಕಿಡಿಕಾರಿದರು.
ಇಂದು ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕುಮಾರಸ್ವಾಮಿ ಹೋಗಿ ಮಾತುಕತೆ ನಡೆಸಿದರು. ಬಳಿಕ ಮಾತುಕತೆ ನಡೆಸಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್ ಸೇರ್ಪಡೆ ಆಗುತ್ತಾರೆ. ಅಖಂಡ ನನ್ನ ಪಕ್ಷದಿಂದ ಎರಡು ಬಾರಿ ಆಯ್ಕೆ ಆದವರು. ನಂತರ ಕಾಂಗ್ರೆಸ್ ಇನ್ನೊಬ್ಬ ಸ್ನೇಹಿತರ ಜೊತೆ ಹೋಗಿದ್ದರು. ಅಲ್ಲಿ ಹೋಗಿ ಈಗ ಅವರಿಗೆ ಜೆಡಿಎಸ್ ಸರಿ ಅಂತ ವಾಪಸ್ ಬರೋ ನಿರ್ಣಯ ಮಾಡಿದ್ದಾರೆ. ಆ ಕುಟುಂಬದವರು ಮನೆಗೆ ಬರಬೇಕು ಅಂತ ಮನವಿ ಮಾಡಿದರು. ಅವರ ಆಹ್ವಾನದ ಮೇರೆಗೆ ಹೋಗಿದ್ದೆ. ಶೀಘ್ರವೇ ದೊಡ್ಡ ಬೃಹತ್ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ತಿಳಿಸಿದರು.

















