ಹಾಸನ: ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂಗಾರು ಮಳೆ ಬರುವವರೆಗೆ ಕುಡಿಯುವ ನೀರಿನ ಪೂರೈಕೆಗೆ ಆತಂಕ ಎದುರಾಗಿದೆ. ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದು, ಜಾನುವಾರುಗಳ ಅಗತ್ಯ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಜಲಾಶಯದ ಮಟ್ಟ ವೇಗವಾಗಿ ಇಳಿಯುತ್ತಿದೆ ಎನ್ನಲಾಗಿದೆ.
ಈ ಕುರಿತು 2922 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ನೀರಿನ ಮಟ್ಟ 2892.47 ಅಡಿಗೆ ಇಳಿದಿದೆ. ಕಳೆದ ವರ್ಷ ಇದೇ ದಿನ 2899.15 ಅಡಿ ನೀರಿನ ಸಂಗ್ರಹವಿತ್ತು. ಅಂದರೆ, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 6 ಅಡಿಗಳಷ್ಟು ಕಡಿಮೆಯಾಗಿದೆ. 37.103 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 15.442 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಬಳಕೆಗೆ ಲಭ್ಯವಿರುವ ಸಂಗ್ರಹ ಕೇವಲ 11.070 ಟಿಎಂಸಿ ಮಾತ್ರ. ಕಳೆದ ವರ್ಷ ಇದೇ ಅವಧಿಯಲ್ಲಿ 14.832 ಟಿಎಂಸಿ ಸಂಗ್ರಹವಿತ್ತು. ಒಳಹರಿವು ಕುಸಿತ, ಹೊರಹರಿವು ಏರಿಕೆ: ಜಲಾಶಯಕ್ಕೆ ಸದ್ಯ ಕೇವಲ 44 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 628 ಕ್ಯುಸೆಕ್ ನೀರು ಹರಿದುಬಂದಿತ್ತು. ಇನ್ನೊಂದೆಡೆ, ಜಲಾಶಯದಿಂದ ಒಟ್ಟು 2,450 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಎಡದಂಡೆ ನಾಲೆಗೆ 2,150 ಹಾಗೂ ನದಿಗೆ 300 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಒಟ್ಟು ಹೊರಹರಿವು ಕೇವಲ 300 ಕ್ಯುಸೆಕ್ ಮಾತ್ರ ಇತ್ತು. ಹಾಗೂ ಬಲದಂಡೆ ನಾಲೆ, ಎಚ್ಆರ್ಬಿಎಚ್ಎಲ್ಸಿ ಹಾಗೂ ಎತ್ತಿನಹೊಳೆ ಯೋಜನೆಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಆದರೆ ಬೇಸಿಗೆ ತೀವ್ರವಾಗಿರುವುದರಿಂದ ಜಾನುವಾರುಗಳಿಗೆ ಮತ್ತು ವಿವಿಧ ಗ್ರಾಮಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಎಡದಂಡೆ ನಾಲೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳು ಹಾಗೂ ನೆರೆಯ ಜಿಲ್ಲೆಗಳ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ಜಲಾಶಯವೇ ಆಗಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆ ಇದ್ದು, ಅಲ್ಲಿಯವರೆಗೆ ಇದೇ ಸಂಗ್ರಹದ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ನಿರೀಕ್ಷಿತ ಮಳೆ ತಡವಾದರೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವಾಗಿದ್ದು, ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಸದ್ಯದ ಸಂಗ್ರಹ ಸಾಕು: ಜಲಾಶಯದಲ್ಲಿ ಸದ್ಯ ಇರುವ ಸಂಗ್ರಹ, ಮುಂಗಾರು ಬರುವವರೆಗೆ ಕುಡಿಯುವ ನೀರಿನ ಅವಶ್ಯಕತೆಗೆ ಸಾಕಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಬೇಸಿಗೆಯ ತೀವ್ರತೆ ಇನ್ನಷ್ಟು ಹೆಚ್ಚಾದರೆ ಹಾಗೂ ಮಳೆ ವಿಳಂಬವಾದರೆ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರ್ವಜನಿಕರು ಅನವಶ್ಯಕ ನೀರಿನ ಬಳಕೆ ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

















