ಮನೆ ಸುದ್ದಿ ಜಾಲ ಕೊಲೆಯಲ್ಲಿ ಅಂತ್ಯವಾದ ಅಣ್ಣ-ತಮ್ಮರ ನಡುವಿನ ಜಗಳ : ಧಾರವಾಡ

ಕೊಲೆಯಲ್ಲಿ ಅಂತ್ಯವಾದ ಅಣ್ಣ-ತಮ್ಮರ ನಡುವಿನ ಜಗಳ : ಧಾರವಾಡ

0

ಧಾರವಾಡ :  ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದರರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ. ಮನೆಯ ದಾರಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಮ್ಮನೇ ಸ್ವಂತ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು  ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಒಂದೇ ಮನೆಯಲ್ಲಿ ಬೇರೆ ಬೇರೆ ವಾಸವಾಗಿದ್ದ ಮಲ್ಲಯ್ಯ ಚಿಕ್ಕಮಠ ಮತ್ತು ಶ್ರೀಕಾಂತ ಚಿಕ್ಕಮಠ ಸಹೋದರರ ನಡುವೆ ಮನೆಯ ದಾರಿ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದ್ದು, ಜಗಳ ತಾರಕಕ್ಕೇರಿದೆ. ಈ ವೇಳೆ, ಅಣ್ಣ ಮಲ್ಲಯ್ಯ ಚಿಕ್ಕಮಠ ತನ್ನ ತಮ್ಮ ಶ್ರೀಕಾಂತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಶ್ರೀಕಾಂತ, ಅಣ್ಣನ ಕೈಯಲ್ಲಿದ್ದ ಚಾಕುವನ್ನೇ ಕಸಿದುಕೊಂಡು ಪ್ರತಿಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.   ಇದರಿಂದ ಗಂಭೀರವಾಗಿ ಗಾಯಗೊಂಡ ಮಲ್ಲಯ್ಯನನ್ನು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಲ್ಲಯ್ಯ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.