ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಪರೀಕ್ಷೆ ಫೀಸ್ ವಿಚಾರವಾಗಿ ಪೋಷಕರು ಬೈದಿದ್ದರಿಂದ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ ಬಾಲಕಿ ಬರೆದಿದ್ದ ಡೆತ್ ನೋಟ್ ಹಾಗೂ ಮೊಬೈಲ್ ಚಾಟಿಂಗ್ ಮಾಹಿತಿ ಹೊರಬಂದ ನಂತರ ಪ್ರಕರಣದಲ್ಲಿ ಪ್ರೇಮ ವಂಚನೆ ಆರೋಪ ಕೇಳಿ ಬಂದಿದೆ. ಈ ಬೆಳವಣಿಗೆಯಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಳೆದ ಏಪ್ರಿಲ್ 23ರಂದು ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೊದಲಿಗೆ ಇದು ಸಾಮಾನ್ಯ ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಕುಟುಂಬಸ್ಥರು ಸಹ ಪರೀಕ್ಷೆ ಶುಲ್ಕದ ವಿಚಾರಕ್ಕೆ ಮನಸ್ತಾಪ ಉಂಟಾಗಿ ಬಾಲಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದುಕೊಂಡಿದ್ದರು.
ಆದರೆ ಘಟನೆ ನಡೆದ ಎರಡು ದಿನಗಳ ಬಳಿಕ ಬಾಲಕಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಮೊಬೈಲ್ ನಲ್ಲಿ ಯುವಕನೊಬ್ಬನೊಂದಿಗೆ ನಡೆಸಿದ ಚಾಟಿಂಗ್ ಪತ್ತೆಯಾಗಿದ್ದು, ಇಬ್ಬರ ನಡುವೆ ಆತ್ಮೀಯ ಸಂಬಂಧ ಇತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಬಾಲಕಿ ತನ್ನ ನೋಟ್ ಬುಕ್ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಬರೆದು ಇಟ್ಟಿದ್ದಾಳೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ “ನನಗೆ ನಂಬಿಕೆ ಮೂಡಿಸಿ ಮೋಸ ಮಾಡಿದ್ದಾರೆ” ಎಂಬ ಅರ್ಥದ ಬರಹಗಳು ಇದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬರಹಗಳು ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು, ಪ್ರೇಮ ಸಂಬಂಧದಲ್ಲಿ ಉಂಟಾದ ನೋವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಾಲಕಿ ತನ್ನ ಭಾವನೆಗಳನ್ನು ನೋಟ್ ಬುಕ್ ನಲ್ಲಿ ದಾಖಲಿಸಿದ್ದಾಳೆ ಎಂದು ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಉಮೇಶ್ ಎಂಬ ಯುವಕನ ಹೆಸರು ಕೇಳಿಬರುತ್ತಿದೆ. ಟ್ರ್ಯಾಕ್ಟರ್ ಡ್ರೈವರ್ ಆಗಿದ್ದ ಆತ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತಿದೆ. ಬಾಲಕಿ ತನ್ನ ಮೆಸೇಜ್ ಗಳಲ್ಲಿ “ಅವನು ನನಗೆ ಮೋಸ ಮಾಡುತ್ತಾನೆ ಎಂದು ನಾನು ಊಹಿಸಿರಲಿಲ್ಲ” ಎಂದು ಬರೆದಿದ್ದಾಳೆ ಎನ್ನಲಾಗಿದೆ. ಈ ಚಾಟಿಂಗ್ ಹಾಗೂ ಬರಹಗಳ ಆಧಾರದಲ್ಲಿ ಕುಟುಂಬಸ್ಥರು ಉಮೇಶ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇನ್ನೊಂದು ಗಂಭೀರ ಆರೋಪವೂ ಪೊಲೀಸರ ವಿರುದ್ಧ ಕೇಳಿ ಬಂದಿದೆ. ದೂರು ದಾಖಲಿಸಲು ಹೋದಾಗ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಬೆದರಿಸಿ ಕಳುಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ನಂತರ ಕುಟುಂಬಸ್ಥರು ಆನ್ ಲೈನ್ ಮೂಲಕ ದೂರು ದಾಖಲಿಸಿದ್ದು, ಬಳಿಕ ಎಫ್ಐಆರ್ ದಾಖಲಾಗಿದೆಯಂತೆ. ಪ್ರಕರಣ ಇದೀಗ ತನಿಖೆ ಹಂತದಲ್ಲಿದೆ.
ಈ ನಡುವೆ, ತಹಶೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಹೂತಿಟ್ಟಿದ್ದ ಬಾಲಕಿಯ ಶವವನ್ನು 15 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರು ಮರಣೋತ್ತರ ಪರೀಕ್ಷೆಯಿಂದ ಪ್ರಕರಣದ ನಿಜಾಂಶ ಹೊರಬರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಕೆಲವರು ಪ್ರಯತ್ನ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಬಾಲಕಿ ಬರೆದಿಟ್ಟಿರುವ ಹೆಸರುಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಸದ್ಯ ಕಮಲಾಪುರ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

















