ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇದೀಗ ಪ್ರತಿಷ್ಠಿತ “ಝೆಪ್ಟೋ ಸಪ್ಲೈ ಚೈನ್ ಎಕ್ಸಲೆನ್ಸ್ ಅವಾರ್ಡ್” ಪಡೆದು ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 100ಕ್ಕೂ ಹೆಚ್ಚು ವರ್ಷಗಳ ಪರಂಪರೆ ಹೊಂದಿರುವ ಕೆಎಸ್ಡಿಎಲ್ ಸಂಸ್ಥೆ ತನ್ನ ಜನಪ್ರಿಯ ಮೈಸೂರು ಸ್ಯಾಂಡಲ್ ಸೋಪ್ ಮೂಲಕ ಡಿಜಿಟಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಗಳ ತ್ವರಿತ ವಾಣಿಜ್ಯ ವಹಿವಾಟಿನ ಸಾಧನೆಯನ್ನು ಪರಿಗಣಿಸಿ ಝೆಪ್ಟೋ ಕಂಪನಿ “ಕ್ವಿಕ್ ಕಾಮರ್ಸ್” ವಿಭಾಗದಲ್ಲಿ ಕೆಎಸ್ಡಿಎಲ್ಗೆ “ಸಪ್ಲೈ ಚೈನ್ ಎಕ್ಸಲೆನ್ಸ್ ಅವಾರ್ಡ್” ನೀಡಿ ಗೌರವಿಸಿದೆ ಎಂದು ತಿಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ. ಪ್ರಶಾಂತ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಕೆಎಸ್ಡಿಎಲ್ ಸಂಸ್ಥೆಯ ಇ-ಕಾಮರ್ಸ್ ವಹಿವಾಟು ಕಳೆದ ಮೂರು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದೆ ಕೇವಲ 28 ಕೋಟಿ ರೂಪಾಯಿ ಇದ್ದ ಆನ್ಲೈನ್ ವಹಿವಾಟು ಇದೀಗ 122 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಮಾರುಕಟ್ಟೆ ವಿಸ್ತರಣೆ, ಡಿಜಿಟಲ್ ಪ್ರಚಾರ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಎರಡು ವರ್ಷಗಳ ಹಿಂದೆ “ಝೆಪ್ಟೋ” ಸೇರಿದಂತೆ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ತಿಂಗಳಿಗೆ ಕೇವಲ 10 ಲಕ್ಷ ರೂಪಾಯಿ ಮೌಲ್ಯದ ಮೈಸೂರು ಸ್ಯಾಂಡಲ್ ಸೋಪ್ ಮಾರಾಟವಾಗುತ್ತಿತ್ತು. ಆದರೆ ಈಗ ಅದೇ ಮಾರಾಟ ಪ್ರಮಾಣ ತಿಂಗಳಿಗೆ 2 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಕ್ವಿಕ್ ಕಾಮರ್ಸ್ ವಿಭಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮೊದಲ ಸ್ಥಾನದಲ್ಲಿರುವುದು ಕೆಎಸ್ಡಿಎಲ್ಗೆ ದೊಡ್ಡ ಹೆಗ್ಗಳಿಕೆ ತಂದಿದೆ.
ಪಾರಂಪರಿಕ ಮೌಲ್ಯಗಳನ್ನು ಉಳಿಸಿಕೊಂಡೇ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು ಕೆಎಸ್ಡಿಎಲ್ ಯಶಸ್ಸಿನ ಪ್ರಮುಖ ಕಾರಣವಾಗಿದೆ. ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಸಂಸ್ಥೆಯ ಉತ್ಪನ್ನಗಳು ಅಗ್ರ ಸ್ಥಾನ ಪಡೆಯಲು ತಂತ್ರಜ್ಞಾನ ಆಧಾರಿತ ಪೂರೈಕೆ ವ್ಯವಸ್ಥೆ, ಗುಣಮಟ್ಟದ ಉತ್ಪಾದನೆ ಮತ್ತು ವೇಗದ ವಿತರಣಾ ವ್ಯವಸ್ಥೆ ಸಹಕಾರಿಯಾಗಿದೆ.
ಎಫ್ಎಂಸಿಜಿ ವಿಭಾಗದಲ್ಲಿ ಕೆಎಸ್ಡಿಎಲ್ ಉತ್ಪನ್ನಗಳು ಪ್ರಮುಖ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿವೆ. ಡಿಜಿಟಲ್ ವಹಿವಾಟು ಕ್ಷೇತ್ರದಲ್ಲಿ ಝೆಪ್ಟೋ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಹೊಂದಿರುವ ಸಹಭಾಗಿತ್ವ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ.
ಇ-ಕಾಮರ್ಸ್ ವಹಿವಾಟು ವಿಸ್ತರಣೆಗೆ ಕಳೆದ ಮೂರು ವರ್ಷಗಳಿಂದ ಪ್ರತ್ಯೇಕ ಪೂರೈಕೆದಾರರನ್ನು ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ಕೀವರ್ಡ್ ಜಾಹೀರಾತು, ಆನ್ಲೈನ್ ಪ್ರಚಾರ, ಬ್ಯಾನರ್ ಅಭಿಯಾನ, ಬ್ರ್ಯಾಂಡ್ ವಿಸಿಬಿಲಿಟಿ ಹಾಗೂ ಗ್ರಾಹಕ ಅಧ್ಯಯನಗಳ ಮೂಲಕ ಡಿಜಿಟಲ್ ಮಾರುಕಟ್ಟೆಯನ್ನು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕೆಎಸ್ಡಿಎಲ್ ಸಂಸ್ಥೆ 2025-26ನೇ ಸಾಲಿನಲ್ಲಿ ಸುಮಾರು 2016 ಕೋಟಿ ರೂಪಾಯಿ ವಹಿವಾಟು ನಡೆಸಿ ಶತಮಾನದಲ್ಲೇ ಅತ್ಯಧಿಕ ಆದಾಯ ಗಳಿಸಿದೆ. ಇದರೊಂದಿಗೆ 507 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿರುವುದು ಸಂಸ್ಥೆಯ ಇತಿಹಾಸದಲ್ಲೇ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ಸಾಬೂನು, ಮಾರ್ಜಕ ಸೇರಿದಂತೆ ಹಲವು ಹೊಸ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಕೆಎಸ್ಡಿಎಲ್ ಹೊಸ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ವಿಜಯಪುರದಲ್ಲಿ ಶ್ರೀಗಂಧ ಅಧ್ಯಯನ ಪೀಠ ಸ್ಥಾಪನೆ ಕುರಿತೂ ಚಿಂತನೆ ನಡೆದಿದೆ. ಶ್ರೀಗಂಧ ಮರಗಳ ಕಳ್ಳತನ ತಡೆಯಲು ಹೊಸ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧವಿದ್ದು, ಸಾರ್ವಜನಿಕರಿಂದಲೂ ಸಲಹೆಗಳನ್ನು ಆಹ್ವಾನಿಸಲಾಗಿದೆ.

















