ಮನೆ ಕವನ “ಬೀಳ್ಕೊಡುಗೆ”- ಕವನ

“ಬೀಳ್ಕೊಡುಗೆ”- ಕವನ

0

ಚಡ್ಡಿಯ ಪರಿಧಿ ಮೀರಿ ಜೋತುಬಿದ್ದ
ಗೋಲಿ ತುಂಬಿದ ಜೇಬು
ಎಷ್ಟೊಂದು ಆಳ ಎನಿಸುತ್ತಿದ್ದ ಸೀಳು ಗಾಲುವೆ
ಸಮುದ್ರವೆನಿಸುವಂತೆ ಬಾಸವಾಗುತ್ತಿದ್ದ ಕೆರೆ,ಕಟ್ಟೆ
ಬೆಳೆದಂತೆ ಬೆರಗು ಗಣ್ಣಿನ ನೋಟ ಅರಿವಿಲ್ಲದೆ ಮರೆಯಾಗುತ್ತದೆ…

ಅದುವರೆವಿಗೂ ಜೈಲಿನಂತೆ ಬಾಸವಾಗುತ್ತಿದ್ದ ಶಾಲೆ
ಪಂಚರ್ ಮಾಡಬೇಕೆಂದುಕೊಂಡಿದ್ದ ಮೇಷ್ಟ್ರ ಬೈಕು
ಸ್ವರ್ಗದಂತಿದ್ದ ಕಾಲೇಜು, ಫ್ರೆಂಡ್ಸು
ಆಂಟಿ, ಆಂಕಲ್‌ಗಳಾಗಿದ್ದ ಕಂಡಕ್ಟರ್, ಡ್ರೈವರ್
ಹೀಗೆ ಹಂತ,ಹಂತವಾಗಿ ಬೀಳ್ಕೊಡಬೇಕು…

ಏದುಸಿರು ಬಿಡುತ್ತ, ಕೆಮ್ಮುತ್ತ, ಕ್ಯಾಕರಿಸುತ್ತ
ಓಡಾಡುತ್ತಿದ್ದ ಅಜ್ಜ,ಅಜ್ಜಿ ಕೊನೆಯುಸಿರೆಳೆದ ಕ್ಷಣ
ಗಂಡುಬೀರಿಯಂತೆ ಗುದ್ದಾಟಕ್ಕೆ ನಿಲ್ಲುತ್ತಿದ್ದ
ಅಕ್ಕ, ತಂಗಿ ದೊಡ್ಡವರಾಗಿದ್ದು, ನಾಚಿಕೊಂಡಿದ್ದು
ಮದುವೆಯಾಗಿ ಎರಡು ಮಕ್ಕಳ ಹಡದಿದ್ದು
ನೆನಪುಗಳು ಇನ್ನೂ ಹಸಿಯಾಗಿವೆ, ಕಣ್ತುಂಬುತ್ತವೆ…

ಓದುವ ಆಸೆಯಿಂದ ಊರ ನಾವೇ ಬೀಳ್ಕೊಟ್ಟಿದ್ದು
ಆವಾಗಲೇ ಅಲ್ಲವೇ ನನ್ನೂರು ಇಷ್ಟೊಂದು ದೂರ ಅನಿಸಿದ್ದು
ಜಾತಿ, ಧರ್ಮಗಳಾಚೆಗೆ ಸ್ನೇಹ ಬೆಳೆದಿದ್ದು
ಚಡ್ಡಿಯ ಗೆಳೆಯರ ಜಾಗಕ್ಕೆ ಪ್ಯಾಂಟ್ ಗೆಳೆಯರು ಆವರಿಸಿದ್ದು
ಆ ದಿನ ಇನ್ನೂ ನೆನಪಿದೆ ಪೆಟ್ಟಿಗೆ ಹೊತ್ತು
ಬಸ್ ಹತ್ತಿಸಿ ಒಬ್ಬೊಬ್ಬರ ಬಾಚಿತಬ್ಬಿ ಬೀಳ್ಕೊಟಿದ್ದು…

ಬೆಳಗ್ಗೆ ಮನೆಯವರಿಗೆ
ಕಾಯಕ ಮುಗಿದ ಬಳಿಕ ಕಚೇರಿಯವರಿಗೆ
ಹೀಗೆ ನಿತ್ಯ ಆತ್ಮೀಯರ ಬೀಳ್ಕೊಡುತ್ತಲೆ ಇರುತ್ತೇವೆ
ಮತ್ತೆ, ಮತ್ತೆ ಸೇರುತ್ತೇವೆ ಎಂಬ ನಂಬುಗೆಯೊಂದಿಗೆ
ಅದೇ ಪ್ರೀತಿ, ಸ್ನೇಹ, ನಗುವಿನೊಂದಿಗೆ.

  • ರವಿ ಡಿ.ಗಾಯನಹಳ್ಳಿ