ಮನೆ ಸುದ್ದಿ ಜಾಲ ಹೈಕೋರ್ಟ್ ನಿಂದ ಸರ್ಕಾರಕ್ಕೆ ನೋಟಿಸ್ : ಗೃಹಲಕ್ಷ್ಮಿ ಯೋಜನೆ ಬಾಕಿ ಕಂತುಗಳ ಬಿಡುಗಡೆ

ಹೈಕೋರ್ಟ್ ನಿಂದ ಸರ್ಕಾರಕ್ಕೆ ನೋಟಿಸ್ : ಗೃಹಲಕ್ಷ್ಮಿ ಯೋಜನೆ ಬಾಕಿ ಕಂತುಗಳ ಬಿಡುಗಡೆ

0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಗೃಹಲಕ್ಷ್ಮಿ” ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಮಾಸಿಕ ಕಂತುಗಳ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ಬೆಂಗಳೂರಿನ ಆರ್.ಗಂಗಾ ಮತ್ತು ಜಿ.ಡಿ.ಪವಿತ್ರಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಮತ್ತು ನ್ಯಾಯಮೂರ್ತಿ ಕೆ.ಮನ್ಮಧರಾವ್ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ ಎನ್ನಲಾಗಿದೆ.

ಈ ಕುರಿತು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಈ ಯೋಜನೆಯನ್ನೇ ನೆಚ್ಚಿಕೊಂಡಿದ್ದು, ಹಣ ಬಿಡುಗಡೆಯಾಗದ ಕಾರಣ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಬಾಕಿ ಇರುವ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. 2024-2025ರ ಆರ್ಥಿಕ ವರ್ಷದಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಫಲಾನುಭವಿಗಳಿಗೆ ತಲುಪಿಲ್ಲ. ಆಡಳಿತಾತ್ಮಕ ವರ್ಗಾವಣೆಯ ಕಾರಣದಿಂದ ಸುಮಾರು 5,000 ಕೋಟಿ ಸಾರ್ವಜನಿಕ ಹಣ ಲ್ಯಾಪ್ಸ್ ಆಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಈ ಕಂತುಗಳ ವಿಳಂಬ ಮತ್ತು ತಾಂತ್ರಿಕ ದೋಷಗಳ ಬಗ್ಗೆ ವಿಧಾನಸಭೆಯಲ್ಲಿ ವಿವರಿಸಿದ್ದಾರೆ. ಆದ್ದರಿಂದ ಹಣ ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಸಂಬಂಧ ಘೋಷಣೆ ಮಾಡಲಾಗಿತ್ತು.

ಈ ಯೋಜನೆಯನ್ನು 2023ರ ಜೂನ್ ತಿಂಗಳಿನಿಂದ ಅಧಿಕೃತವಾಗಿ ಜಾರಿಗೆ ಬಂದಿತು. ರಾಜ್ಯದಲ್ಲಿ ಒಟ್ಟು 1.28 ಕೋಟಿಗೂ ಹೆಚ್ಚು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಯೋಜನೆಗೆ ಈವರೆಗೂ ಸುಮಾರು 52,416.17 ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ. ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ವಿಧಾನಸಭೆಯಲ್ಲಿಯೂ ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿತ್ತು. ಕೊನೆಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ‌‌ ಕೇಳಿದ್ದರು. ಅಲ್ಲದೆ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವರು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ.