ಮನೆ ಸುದ್ದಿ ಜಾಲ ಕ್ರೆಡಿಟ್ ವಾರ್: ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ, ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ..!

ಕ್ರೆಡಿಟ್ ವಾರ್: ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ, ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ..!

0

ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳ ಕ್ರೆಡಿಟ್ ಪಡೆಯುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ರ್ಯಕರ್ತರ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಕೈ-ಕಮಲ ಪಾಳಯದ ನಡುವಿನ ‘ಕ್ರೆಡಿಟ್ ವಾರ್’ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ನೂರಾರು ಪೊಲೀಸರ ಸಮ್ಮುಖದಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರು ಸರಿಸಮನಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ರಾಂಗುರ ಟು ಕೆ.ಆರ್.ಪೇಟೆ ಮಾರ್ಗದ ರಸ್ತೆ ಕಾಮಗಾರಿ ವೀಕ್ಷಣೆಗಾಗಿ ಮಾಜಿ ಶಾಸಕ ಸಿ.ಟಿ.ರವಿ ಅವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿ, ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರು. ನೋಡ ನೋಡುತ್ತಿದ್ದಂತೆ ಇಡೀ ರಸ್ತೆ ರಣರಂಗವಾಗಿ ಮಾರ್ಪಟ್ಟಿತು.

ಗಲಾಟೆ ತಾರಕಕ್ಕೇರಿದಾಗ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆಸಲು ತೀವ್ರ ಯತ್ನ ನಡೆಸಿದರು. ಆದರೆ ಕಮಲ ಪಾಳಯದ ಕಾರ್ಯಕರ್ತರು ಸಿ.ಟಿ.ರವಿ ಸುತ್ತ ರಕ್ಷಣಾ ಕೋಟೆಯಂತೆ ನಿಂತು, ಅವರನ್ನು ಮುಟ್ಟದಂತೆ ತಡೆದರು. ಈ ನೂಕಾಟ-ತಳ್ಳಾಟದ ಮಧ್ಯೆಯೂ ಸಿ.ಟಿ.ರವಿ ಅವರು ಸ್ಥಳದಿಂದ ಕದಲದೇ, ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದರು. “ಬಾರೋ… ಬಾ… ಹೊಡೀ…” ಎಂದು ಎದುರಾಳಿಗಳಿಗೆ ಸವಾಲು ಹಾಕಿದರು.

“ಮೆಡಿಕಲ್ ಕಾಲೇಜ್, ನೂತನ ಡಿಸಿ ಆಫೀಸ್, ನೀರಾವರಿ ಯೋಜನೆಗೆ 5,800 ಕೋಟಿ ರೂ. ಹಣ ತಂದಿದ್ದು ನಾನು. ಈ ರಸ್ತೆಗೂ ನಾನೇ ಹಣ ತಂದಿದ್ದೇನೆ. ಇದು ಜನರಿಗೆ ಗೊತ್ತಾಗುತ್ತದೆ ಎಂಬ ಭಯದಿಂದ ಕಾಂಗ್ರೆಸ್‌ನವರು ಗಲಾಟೆ ಮಾಡಿಸುತ್ತಿದ್ದಾರೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇನೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ” ಎಂದು ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ಈ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಆರಂಭದಲ್ಲಿ ಪೊಲೀಸರು ಪರಿಸ್ಥಿತಿ ನಿಭಾಯಿಸಲು ತಡಕಾಡಿದರು. ನೂರಾರು ಪೊಲೀಸರು ಇದ್ದಾಗ್ಯೂ, ಕಾರ್ಯಕರ್ತರು ಪೊಲೀಸರನ್ನೇ ತಳ್ಳಿ ಮುನ್ನುಗ್ಗಿದರು. ಸುರಕ್ಷತೆಯ ದೃಷ್ಟಿಯಿಂದ ಸ್ಥಳದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದರೂ ಸಿ.ಟಿ.ರವಿ ಅವರು ನಿರಾಕರಿಸಿ, ಕೊನೆಯವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಸದಾ ತಂಪಾಗಿರುತ್ತಿದ್ದ ಕಾಫಿ ನಾಡು ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಂತಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ, ಮುಂದಿನ ದಿನಗಳಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿಯ ‘ಕ್ರೆಡಿಟ್ ರಾಜಕಾರಣ’ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ನಾಯಕರು ಮತ್ತು ಕಾರ್ಯಕರ್ತರ ಈ ವರ್ತನೆಯನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮತದಾರರೇ ಇದಕ್ಕೆ ಅಂತಿಮ ತೀರ್ಪು ನೀಡಲಿದ್ದಾರೆ.