ಹಾಸನ : ಪೋಷಕರೇ ಕೋಟ್ಯಂತರ ರೂಪಾಯಿ ವಂತಿಗೆ ಸಂಗ್ರಹಿಸಿ ಶಾಲೆ ಆರಂಭಿಸಿದ್ದು, ಆಮೇಲೆ ವಂಚನೆ ಮಾಡಲಾಗಿದೆ ಅಂತ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಐಚನಹಳ್ಳಿ ಗ್ರಾಮದಲ್ಲಿರುವ ಋಷಿಶ್ರೀ ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಗಂಭೀರ ಆರೋಪ ಮಾಡಿದ್ದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಮಾಲೀಕರ ಹಗ್ಗಜಗ್ಗಾಟದಿಂದ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದ್ದು ಹೊಸ ಮ್ಯಾನೇಜ್ಮೆಂಟ್ ಶಾಲೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಹಾಸನದ ಐಚನಹಳ್ಳಿ ಗ್ರಾಮದಲ್ಲಿರುವ ಋಷಿಶ್ರೀ ವಿದ್ಯಾನಿಕೇತನ ಖಾಸಗಿ ಶಾಲೆ ಆರಂಭಿಸಲು ಸುರೇಶ್.ಸಿ ನೇತೃತ್ವದ ಆಡಳಿತ ಮಂಡಳಿ 350ಕ್ಕೂ ಹೆಚ್ಚು ಪೋಷಕರಿಂದ ತಲಾ 1 ಲಕ್ಷ ಸಂಗ್ರಹಿಸಿದ್ದರು. ಆದರೆ ಮಕ್ಕಳ ಶಿಕ್ಷಣ ಮುಗಿಯುವ ಮೊದಲೇ ಶಾಲೆ ಮಾರಾಟ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ. ಶಾಲೆಯ ಹಳೆ ಮಾಲೀಕ ಸುರೇಶ್.ಸಿ ಅವರು ಪ್ರಕಾಶ್ ಎಂಬುವವರಿಗೆ 12 ಕೋಟಿ ರೂ.ಗಳಿಗೆ ಶಾಲೆ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶಾಲೆ ಮಾರಾಟದ ಅಗ್ರಿಮೆಂಟ್ ಮಾಡಿದ ಬಳಿಕ ಹೊಸ ಮ್ಯಾನೇಜ್ಮೆಂಟ್ ಹಾಗೂ ಹಳೇ ಮ್ಯಾನೇಜ್ಮೆಂಟ್ ನಡುವೆ ಜಟಾಪಟಿ ಶುರುವಾಗಿದ್ದು, ಆರ್ಥಿಕ ನಷ್ಟದಿಂದ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಶಾಲೆಯ ಹಳೆಯ ಮಾಲೀಕ ಸುರೇಶ್.ಸಿ ಹಾಗೂ ಹೊಸ ಮಾಲೀಕ ಪ್ರಕಾಶ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. 12 ಕೋಟಿಗೆ ಶಾಲೆ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಸುರೇಶ್ ಅವರು ಏಕಾಏಕಿ ಶಾಲೆ ಮಾರಾಟ ಮಾಡಲ್ಲ ಎಂದು ಈಗ ಉಲ್ಟಾ ಹೊಡೆದಿದ್ದಾರೆ. ಶಾಲಾ ಮಾಲೀಕರ ಜಟಾಪಟಿಯಲ್ಲಿ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಶಾಲೆಗೆ ಅಡ್ಮಿಷನ್ ಜಾಸ್ತಿ ಆದರೆ ಶಾಲೆ ಮಾರಾಟ ಮಾಡಲ್ಲ ಎಂದು ಹಳೆಯ ಆಡಳಿತ ಮಂಡಳಿ ಹೇಳುತ್ತಿದೆ.
ಇದರಿಂದ ಆತಂಕಗೊಂಡಿರುವ ಪೋಷಕರು ಹಾಸನದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಹೊಸ ಆಡಳಿತ ಮಂಡಳಿ ಶಾಲೆ ನಡೆಸಲು ಅವಕಾಶ ನೀಡಬೇಕು, ಇಲ್ಲಾ ನಮ್ಮ ಮೂರುವರೆ ಕೋಟಿ ಹಣ ವಾಪಸ್ ಕೊಡಿ ಎಂದು ಪೋಷಕರ ಪಟ್ಟು ಹಿಡಿದಿದ್ದಾರೆ.
ವಿದ್ಯಾರ್ಥಿಗಳು ಪೋಷಕರು ತಿರುಗಿ ಬೀಳುತ್ತಿದ್ದಂತೆ ಶಾಲೆಗೆ ದಾಖಲಾತಿ ಜಾಸ್ತಿಯಾದರೆ ಶಾಲೆಯನ್ನು ಮಾರಾಟ ಮಾಡಲ್ಲ ಅಂತ ಹಳೇ ಆಡಳಿಯ ಮಂಡಳಿ ಹೇಳುತ್ತಿದೆ. ಆದರೆ ಹಳೇ ಹಾಗೂ ಹೊಸ ಆಡಳಿತ ಮಂಡಳಿಯ ಕಿತ್ತಾಟದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


















