ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತಿದೆ ಅನ್ನೋ ಅಭಿಪ್ರಾಯ ಕೇಳಿಬಂದಿದೆ. ಗುರುವಾರ (ಮೇ 21) ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆದಿದೆ. ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ಮನವಿ ಮೇರೆಗೆ ಈ ಕೇಸ್ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಮುಸ್ಲಿಂ ಯುವಕರು ಹಾಗೂ ಕೆಲ ಮುಖಂಡರಿಗೆ ಬಿಗ್ ರಿಲೀಫ್ ಸಿಕ್ಕಿದೆ.
2022ರ ಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ ದೊಡ್ಡ ಗಲಾಟೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಕಿಡಿಗೇಡಿಗಳು ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಬಳಿಕ ಅದನ್ನ ಸ್ವಚ್ಛಗೊಳಿಸಿ ಪೂಜೆಗೆ ಅಂತ ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಹಾಗು ಡಿಸಿ, ಎಸ್ಪಿ ಕಾರಿನ ಮೇಲೆ ಬಡಿಗೆಗಳಿಂದ ಹೊಡೆದು ಕಲ್ಲು ತೂರಾಟ ಮಾಡಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.
ಹೀಗಾಗಿ ಈ ಗಲಾಟೆ ಪ್ರಕರಣ ಸಂಬಂಧ ವಿವಿದ ಮುಸ್ಲಿಂ ಮುಖಂಡರು ಹಾಗೂ ಯುವಕರ ವಿರುದ್ಧ ದಾಖಲಾಗಿದ್ದ ಒಟ್ಟು 13 ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.


















