ನವದೆಹಲಿ, ಮೇ.22: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ಟ್ರೆಂಡ್ ಆಗುತ್ತಿರುವ ಪೇಜ್‌ಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಪ್ರಮುಖವಾಗಿದೆ. ವಿಭಿನ್ನ ಶೈಲಿಯ ವ್ಯಂಗ್ಯಾತ್ಮಕ ರಾಜಕೀಯ ಕಂಟೆಂಟ್, ಯುವಕರ ಸಮಸ್ಯೆಗಳನ್ನು ಆಧರಿಸಿದ ರೀಲ್ಸ್ ಹಾಗೂ ಮೀಮ್ಸ್ ಮೂಲಕ ಈ ಡಿಜಿಟಲ್ ಪೇಜ್ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. “ರಾಜಕೀಯದ ಮುಖವಾಡ, ಯುವಕರಿಂದ ಯುವಕರಿಗಾಗಿ” ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಖಾತೆ ವಿಶ್ವದಾದ್ಯಂತ ಸುಮಾರು 14.8 ಮಿಲಿಯನ್ ಫಾಲೋವರ್ಸ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಈ ಪೇಜ್‌ನ ಫಾಲೋವರ್ಸ್ ಯಾವ ದೇಶಗಳಿಂದ ಹೆಚ್ಚಾಗಿ ಬರುತ್ತಿದ್ದಾರೆ ಎಂಬ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನ ಮೂಲದ ಫಾಲೋವರ್ಸ್ ಹೆಚ್ಚು ಎನ್ನುವ ಆರೋಪ
ವೈರಲ್ ಆಗುತ್ತಿರುವ ಕೆಲವು ಡೇಟಾ ಗ್ರಾಫಿಕ್ಸ್ ಹಾಗೂ ಅನಧಿಕೃತ ಅಂಕಿ-ಅಂಶಗಳ ಪ್ರಕಾರ, ಕಾಕ್ರೋಚ್ ಜನತಾ ಪಾರ್ಟಿ ಪೇಜ್‌ಗೆ ಬರುತ್ತಿರುವ ಒಟ್ಟು ಫಾಲೋವರ್ಸ್‌ಗಳಲ್ಲಿ ಸುಮಾರು ಶೇಕಡಾ 49 ರಷ್ಟು ಜನರು ಪಾಕಿಸ್ತಾನ ಮೂಲದವರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದೇ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಭಾರತೀಯ ಯುವಕರಿಗಾಗಿ ಆರಂಭವಾದ ಪೇಜ್‌ಗೆ ಪಾಕಿಸ್ತಾನದಲ್ಲಿ ಇಷ್ಟು ದೊಡ್ಡ ಮಟ್ಟದ ಬೆಂಬಲ ಯಾಕೆ?” ಎಂಬ ಪ್ರಶ್ನೆಗಳನ್ನು ಹಲವರು ಎತ್ತುತ್ತಿದ್ದಾರೆ.
ಇದರ ಜೊತೆಗೆ ಬಾಂಗ್ಲಾದೇಶದಿಂದಲೂ ದೊಡ್ಡ ಪ್ರಮಾಣದಲ್ಲಿ ಫಾಲೋವರ್ಸ್ ಬರುತ್ತಿದ್ದಾರೆ ಎನ್ನುವ ಮಾಹಿತಿ ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ಟ್ರೆಂಡ್‌ನ್ನು ಸಾಮಾನ್ಯ ಸೋಶಿಯಲ್ ಮೀಡಿಯಾ ಬೆಳವಣಿಗೆಯಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಇದೊಂದು ಯೋಜಿತ ಡಿಜಿಟಲ್ ಕ್ಯಾಂಪೇನ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಟರ್ಕಿ ಸಂಪರ್ಕದ ಬಗ್ಗೆ ನೆಟ್ಟಿಗರ ಅನುಮಾನ
ಇತ್ತೀಚೆಗೆ ವೈರಲ್ ಆಗಿರುವ ವರದಿಗಳಲ್ಲಿ ಟರ್ಕಿ ಮೂಲದ ಬಳಕೆದಾರರು ಕೂಡ Cockroach Janta Party ಪೇಜ್ ಅನ್ನು ದೊಡ್ಡ ಪ್ರಮಾಣದಲ್ಲಿ ಫಾಲೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ವಿಚಾರವನ್ನು ಆಧರಿಸಿ ಹಲವು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. “ಭಾರತದ ನಿರುದ್ಯೋಗ, ‘ ನೀಟ್’ ವಿವಾದ ಹಾಗೂ ಯುವಕರ ಅಸಮಾಧಾನವನ್ನು ಬಳಸಿಕೊಂಡು ವಿದೇಶಿ ಬಾಟ್ಸ್ ಮತ್ತು ಫೇಕ್ ಅಕೌಂಟ್ಸ್ ಮೂಲಕ ಡಿಜಿಟಲ್ ಪ್ರಭಾವ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆಯೇ?” ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಕೆಲವು ಐಟಿ ತಜ್ಞರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು, ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ವೈರಲ್ ಹ್ಯಾಶ್ ಟ್ಯಾಗ್ ಗಳ ಮೂಲಕ ಯುವಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ “ಯೂತ್ ಇಂಡಿಯಾ ಮತ್ತು ಭರತ್ ಸೇರಿದಂತೆ ದೇಶಭಕ್ತಿ ಸಂಬಂಧಿತ ಹ್ಯಾಶ್ ಟ್ಯಾಗ್ ಗಳ ಬಳಕೆ ಬಗ್ಗೆ ಕೂಡ ಚರ್ಚೆ ಜೋರಾಗಿದೆ.
ಇದು ಡಿಜಿಟಲ್ ಟ್ರೆಂಡ್ ಅಥವಾ ದೊಡ್ಡ ಸಂಚು?
ಕಾಕ್ರೋಚ್ ಜನತಾ ಪಾರ್ಟಿ ಗೆ ಸಂಬಂಧಿಸಿದಂತೆ ಇದೀಗ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಕೇವಲ ವ್ಯಂಗ್ಯಾತ್ಮಕ ರಾಜಕೀಯ ಚಳವಳಿಯೆಂದು ಪರಿಗಣಿಸುತ್ತಿದ್ದರೆ, ಇನ್ನೂ ಕೆಲವರು ಇದು ದೊಡ್ಡ ಮಟ್ಟದ ಡಿಜಿಟಲ್ ಪ್ರಭಾವ ಕಾರ್ಯಾಚರಣೆಯ ಭಾಗವಾಗಿರಬಹುದು ಎಂದು ಆರೋಪಿಸುತ್ತಿದ್ದಾರೆ. ಎಕ್ಸ್ (ಟ್ವಿಟರ್) ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಜಾಗತಿಕ ಮಟ್ಟದ ಸೈಬರ್ ಸಂಚು , ವಿದೇಶಿ ‘ಬಾಟ್ಸ್’ ”, “Digital Propaganda” ಎಂಬ ಪದಗಳು ಟ್ರೆಂಡ್ ಆಗುತ್ತಿವೆ.
ಇದರ ನಡುವೆಯೇ ಕೆಲ ನೆಟ್ಟಿಗರು ಭಾರತದ ಕೆಲವು ರಾಜಕೀಯ ಪಕ್ಷಗಳ ಬೆಂಬಲಿಗರ ಹೆಸರನ್ನೂ ಈ ವಿಚಾರದಲ್ಲಿ ಉಲ್ಲೇಖಿಸುತ್ತಿದ್ದಾರೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಹಾಗೂ SDPI ಬೆಂಬಲಿಗರು ಈ ಡಿಜಿಟಲ್ ಟ್ರೆಂಡ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಎಲ್ಲ ಆರೋಪಗಳಿಗೆ ಯಾವುದೇ ಅಧಿಕೃತ ಸಾಕ್ಷ್ಯ ಅಥವಾ ಸ್ವತಂತ್ರ ಪರಿಶೀಲನೆ ಇದುವರೆಗೆ ಲಭ್ಯವಾಗಿಲ್ಲ.
ಸದ್ಯ ಕಾಕ್ರೋಚ್ ಜನತಾ ಪಾರ್ಟಿ ಕುರಿತ ಈ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಕೆಲವರು ಇದನ್ನು ತಮಾಷೆಯ ಟ್ರೆಂಡ್ ಎಂದು ನೋಡುತ್ತಿದ್ದರೆ, ಮತ್ತಷ್ಟು ಜನರು ಇದು ವಿದೇಶಿ ಡಿಜಿಟಲ್ ಪ್ರಭಾವದ ಭಾಗವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


















