ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿತ (Petrol Diesel Tax Reduction) ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಸ್ಪಷ್ಟವಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂಧನ ದರ ಏರಿಕೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ರಾಜ್ಯದ ಜನರಿಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಸರ್ಕಾರ ಯಾವುದೇ ರೀತಿಯ ನೆರವು ನೀಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, “ಕೇಂದ್ರ ಸರ್ಕಾರವೇ ಇಂಧನ ಬೆಲೆ ಹೆಚ್ಚಿಸಿದೆ. ಅವರು ದರ ಹೆಚ್ಚಿಸಿದಾಗ ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡಬೇಕು ಎಂದು ಯಾಕೆ ಕೇಳಲಾಗುತ್ತಿದೆ?” ಎಂದು ಪ್ರಶ್ನಿಸಿದರು.
ಈ ವೇಳೆ ಕೆಲವು ಮಾಧ್ಯಮಗಳ ಪ್ರಶ್ನೆಗಳ ಮೇಲೂ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. “ನೀವು ಕೇಳುವ ಪ್ರಶ್ನೆಗಳಲ್ಲಿ ಕೇಂದ್ರ ಸರ್ಕಾರದ ಪರವಾದ ನಿಲುವು ಕಾಣುತ್ತದೆ,” ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಿಎಂ ಟೀಕಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ಅವಧಿಯನ್ನು ಉದಾಹರಿಸಿದ ಅವರು, ಆ ಸಮಯದಲ್ಲಿ ಪೆಟ್ರೋಲ್ ದರ ಸುಮಾರು 70 ರೂಪಾಯಿ ಮತ್ತು ಡೀಸೆಲ್ ದರ 48 ರೂಪಾಯಿ ಇತ್ತು ಎಂದು ನೆನಪಿಸಿದರು.
ಅದೇ ರೀತಿ ಗ್ಯಾಸ್ ಸಿಲಿಂಡರ್ ಬೆಲೆ ಕೂಡ 414 ರೂಪಾಯಿ ಇತ್ತು. ಆದರೆ ಈಗ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. “ಜನರು ಈಗಿನ ದರಗಳನ್ನು ನೋಡುತ್ತಿದ್ದಾರೆ. ಇಂಧನ ದರ ಹೆಚ್ಚಳಕ್ಕೆ ಕಾರಣ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು,” ಎಂದು ಸಿಎಂ ಹೇಳಿದರು.
















