Cockroach Janata Party: ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ “ಕಾಕ್ರೋಚ್ ಜನತಾ ಪಾರ್ಟಿ” (Cockroach Janata Party – CJP) ಎಂಬ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ವಿಶೇಷವಾಗಿ ಜೆನ್ಜೀ ಯುವಕರ ನಡುವೆ ಈ ಅಭಿಯಾನ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ವ್ಯಂಗ್ಯ, ಮೀಮ್ಸ್ ಹಾಗೂ ಡಿಜಿಟಲ್ ಕ್ಯಾಂಪೇನ್ ರೂಪದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಅಭಿಯಾನಕ್ಕೆ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಬೆಂಬಲ ಸೂಚಿಸಿರುವುದರಿಂದ, ಇದು ಕೇವಲ ಸೋಶಿಯಲ್ ಮೀಡಿಯಾ ಟ್ರೆಂಡ್ ಆಗಿ ಉಳಿಯದೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿಗಳು, ಜನ ಲೋಕಪಾಲ್ ಬಿಲ್ ಬೇಡಿಕೆ ಹಾಗೂ ಯುವಕರ ರಾಜಕೀಯ ಆಸಕ್ತಿಯ ನಡುವೆ ಈ ಹೊಸ ಡಿಜಿಟಲ್ ಅಭಿಯಾನ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ನಂತರ ಯುವಕರು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿದ್ದು, ಈಗ “ಕಾಕ್ರೋಚ್ ಜನತಾ ಪಾರ್ಟಿ” ಅಭಿಯಾನವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ.
ಈ ಅಭಿಯಾನದ ಸಂಸ್ಥಾಪಕರಾಗಿ ಗುರುತಿಸಿಕೊಂಡಿರುವ ಅಭಿಜೀತ್ ದಿಪ್ಕೆ ಅವರು 2020ರಿಂದ 2023ರವರೆಗೆ ಆಮ್ ಆದ್ಮಿ ಪಾರ್ಟಿ (AAP) ಜೊತೆ ಕೆಲಸ ಮಾಡಿದ್ದರು ಎನ್ನಲಾಗಿದೆ. ಪಕ್ಷದ ಸಾಮಾಜಿಕ ಜಾಲತಾಣ ಅಭಿಯಾನ ಹಾಗೂ ಚುನಾವಣಾ ಕ್ಯಾಂಪೇನ್ಗಳಲ್ಲಿ ಅವರು ಸಕ್ರಿಯರಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆ “ಕಾಕ್ರೋಚ್ ಜನತಾ ಪಾರ್ಟಿ” ಅಭಿಯಾನಕ್ಕೆ ರಾಜಕೀಯ ಲಿಂಕ್ ಇದೆಯೇ ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ.
ಇತ್ತೀಚಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ಹಲವು ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿರುವ ಎಎಪಿ, ಪಂಜಾಬ್ ರಾಜ್ಯದಲ್ಲಿಯೂ ಸವಾಲುಗಳನ್ನು ಎದುರಿಸುತ್ತಿದೆ. ಮುಂದಿನ 2027ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ರೀತಿಯ ಡಿಜಿಟಲ್ ರಾಜಕೀಯ ವಾತಾವರಣ ಸೃಷ್ಟಿಸುವ ಪ್ರಯತ್ನವೇ ಈ ಅಭಿಯಾನವೇ ಎಂಬ ಅನುಮಾನಗಳನ್ನು ಕೆಲ ರಾಜಕೀಯ ವಲಯಗಳು ವ್ಯಕ್ತಪಡಿಸುತ್ತಿವೆ.
ವಿಶೇಷವಾಗಿ ಬಿಜೆಪಿ ವಿರುದ್ಧ ವ್ಯಂಗ್ಯ ಹಾಗೂ ಟೀಕೆಗಳನ್ನು ಒಳಗೊಂಡ ಪೋಸ್ಟ್ಗಳು ಹೆಚ್ಚಾಗಿ ಹರಿದಾಡುತ್ತಿರುವುದರಿಂದ, ಇದು ಯುವಕರ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಯುವಕರ ಉದ್ಯೋಗ, ಶಿಕ್ಷಣ ಹಾಗೂ ಬೆಲೆ ಏರಿಕೆ ಮೊದಲಾದ ಸಮಸ್ಯೆಗಳಿಗಿಂತ ರಾಜಕೀಯ ಟಾರ್ಗೆಟಿಂಗ್ ಹೆಚ್ಚಾಗಿದೆ ಎಂಬ ಟೀಕೆ ಸಹ ಕೇಳಿಬರುತ್ತಿದೆ.
ನಟ ಪ್ರಕಾಶ್ ರಾಜ್ ಅವರು ಈ ಅಭಿಯಾನಕ್ಕೆ ಮುಕ್ತ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ದೇಶದ ಯುವಕರು ಎದ್ದು ನಿಂತು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, “ಕಾಕ್ರೋಚ್ ಜನತಾ ಪಾರ್ಟಿ Vs ಬಿಗೋಟ್ ಜನತಾ ಪಾರ್ಟಿ” ಎಂದು ವ್ಯಂಗ್ಯಭರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸುವ ರೀತಿಯ ವಿಡಿಯೋವೊಂದನ್ನೂ ಅವರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ನಟಿ ಹಾಗೂ ಕಾಂಗ್ರೆಸ್ ಮುಖಂಡೆ ರಮ್ಯಾ ಕೂಡ ಪರೋಕ್ಷವಾಗಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ವ್ಲಾಗರ್ ಮತ್ತು ನಟ ಅಲೆನ್ ಗೊನ್ಸಾಲ್ವೆಸ್ ಹಂಚಿಕೊಂಡಿದ್ದ “ನಾನು ಕಾಕ್ರೋಚ್ ಜನತಾ ಪಾರ್ಟಿಯ ಮೊದಲ ಶಾಸಕನಾಗುತ್ತೇನೆ” ಎಂಬ ವಿಡಿಯೋಗೆ ರಮ್ಯಾ “ನನ್ನ ಮತ ನಿಮಗೆ” ಎಂದು ಕಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದರ ಜೊತೆಗೆ ನಟಿ ಉರ್ಫಿ ಜಾವೇದ್, ಗಾಯಕಿ ಚಿನ್ಮಯಿ ಶ್ರೀಪಾದ, ನಿರ್ದೇಶಕ ಅನುರಾಗ್ ಕಶ್ಯಪ್, ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಸೇರಿದಂತೆ ಹಲವು ಸಿನಿ ಕ್ಷೇತ್ರದ ಗಣ್ಯರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಹಲವರು ಸಹ ಈ ಜೆನ್ಜೀ ಡಿಜಿಟಲ್ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.


















