ಬೆಂಗಳೂರು (ಮೇ.22): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದೊಳಗೆ ಹಲವು ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಬಿಜೆಪಿ ಪಕ್ಷದಲ್ಲೂ ಮಹತ್ವದ ಸಂಘಟನಾ ಬದಲಾವಣೆಯ ಸುಳಿವು ಕಾಣಿಸುತ್ತಿದೆ. ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಕೇಂದ್ರ ನಾಯಕತ್ವ ಈಗಾಗಲೇ ಅಭಿಪ್ರಾಯ ಸಂಗ್ರಹ ಕಾರ್ಯ ಪೂರ್ಣಗೊಳಿಸಿದೆ.
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರು ರಾಜ್ಯದ ಪ್ರಮುಖ ನಾಯಕರ ಜೊತೆ ಸಭೆ ನಡೆಸಿ ಅಭಿಪ್ರಾಯಗಳನ್ನು ಕಲೆ ಹಾಕಿದ್ದಾರೆ. ರಾಜ್ಯದ ವಿವಿಧ ಸಮುದಾಯಗಳ ರಾಜಕೀಯ ಸಮೀಕರಣ, ಸಂಘಟನಾ ಸಾಮರ್ಥ್ಯ ಹಾಗೂ ಮುಂದಿನ ಚುನಾವಣಾ ತಂತ್ರಗಳ ಕುರಿತು ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಪೂರ್ಣ
ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ಸಂಬಂಧ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸರಣಿ ಸಭೆಗಳು ನಡೆದಿದ್ದವು. ಪಕ್ಷದ ಹಿರಿಯ ನಾಯಕರು, ಶಾಸಕರು ಹಾಗೂ ಪ್ರಭಾವಿ ಮುಖಂಡರ ಜೊತೆ ಮಾತುಕತೆ ನಡೆಸಿದ ವೀಕ್ಷಕರ ತಂಡ ಇದೀಗ ದೆಹಲಿಗೆ ಮರಳಿದೆ. ಸಂಗ್ರಹಿಸಲಾದ ಅಭಿಪ್ರಾಯಗಳ ವರದಿಯನ್ನು ಬಿಜೆಪಿ ಹೈಕಮಾಂಡ್ ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಹೈಕಮಾಂಡ್ ಅಂತಿಮ ತೀರ್ಮಾನ ಯಾವಾಗ?
ಮೇ 24 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಭೀನ್ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ರಾಜ್ಯ ಪ್ರವಾಸದ ಬಳಿಕ ಅವರು ದೆಹಲಿಗೆ ಹಿಂತಿರುಗಿದ ನಂತರ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ಚರ್ಚೆ ನಡೆಯುವ ಸಾಧ್ಯತೆ ಇದೆ. ಆ ಬಳಿಕವೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿದೆ.
ಸಮುದಾಯ ಆಧಾರಿತ ಲೆಕ್ಕಾಚಾರ
ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕತ್ವ ಸಮುದಾಯ ಆಧಾರಿತ ಸಮೀಕರಣಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದೆ ಎನ್ನಲಾಗಿದೆ. ಲಿಂಗಾಯತ, ಓಬಿಸಿ ಹಾಗೂ ಎಸ್ಸಿ ಸಮುದಾಯಗಳಿಂದ ಯಾರನ್ನು ಆಯ್ಕೆ ಮಾಡಿದರೆ ಪಕ್ಷಕ್ಕೆ ಲಾಭವಾಗಬಹುದು ಎಂಬ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ರೆಬೆಲ್ ಧೋರಣೆಯಿಂದಲೇ ಗಮನ ಸೆಳೆದಿರುವ ರಮೇಶ್ ಜಾರಕಿಹೊಳಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರು ಕೇಂದ್ರ ಸಚಿವ ವಿ ಸೋಮಣ್ಣ ಅವರ ಹೆಸರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸಿರುವ ಮಾಹಿತಿ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂವರ ಹೆಸರು ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ
ಮೇ 21 ರಂದು ನಡೆದ ಮಾತುಕತೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಮೂರು ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯದಿಂದ ವಿ ಸೋಮಣ್ಣ ಅವರನ್ನು ಆಯ್ಕೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಅದೇ ರೀತಿ ಎಸ್ಸಿ ಸಮುದಾಯಕ್ಕೆ ಅವಕಾಶ ನೀಡಬೇಕಾದರೆ ಅರವಿಂದ್ ಲಿಂಬಾವಳಿ ಹಾಗೂ ಓಬಿಸಿ ಸಮುದಾಯಕ್ಕೆ ಆದ್ಯತೆ ನೀಡಬೇಕಾದರೆ ಕುಮಾರ್ ಬಂಗಾರಪ್ಪ ಅವರನ್ನು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೆ ಯಡಿಯೂರಪ್ಪ ಹೆಸರು ಪ್ರಸ್ತಾಪ
ವಿ ಸೋಮಣ್ಣ ಅವರನ್ನು ಹೊರತುಪಡಿಸಿ ಲಿಂಗಾಯತ ಸಮುದಾಯದಿಂದ ಇನ್ನಾರನ್ನು ಪರಿಗಣಿಸಬಹುದು ಎಂದು ವೀಕ್ಷಕರು ಪ್ರಶ್ನಿಸಿದ ವೇಳೆ, ಮತ್ತೆ ಬಿಎಸ್ ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.
ಕುಟುಂಬ ರಾಜಕಾರಣ ವಿರುದ್ಧ ಅಸಮಾಧಾನ
ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ತಮ್ಮ ವಿರೋಧ ವ್ಯಕ್ತಿಗತವಲ್ಲ, ಕುಟುಂಬ ರಾಜಕಾರಣದ ವಿರುದ್ಧ ಮಾತ್ರ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಿಎಸ್ ಯಡಿಯೂರಪ್ಪ ನಂತರ ಇದೀಗ ವಿಜಯೇಂದ್ರ ಅವರಿಗೆ ಅವಕಾಶ ಸಿಗುತ್ತಿರುವ ಹಿನ್ನೆಲೆ ಕುಟುಂಬ ರಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾವು ಲಿಂಗಾಯತ ಸಮುದಾಯದ ವಿರುದ್ಧ ಅಲ್ಲ, ಕುಟುಂಬ ಆಧಾರಿತ ರಾಜಕೀಯಕ್ಕೆ ವಿರೋಧ ಎಂಬ ಮಾತನ್ನೂ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.


















