ಬೆಂಗಳೂರು : ಕಾಂಗ್ರೆಸ್ ನಾಯಕರು, ಕನ್ನಡಪರ ಸಂಘಟನೆಗಳು ಹಾಗೂ ರೈತರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು. ಇದೇ ವೇಳೆ ಕಾಂಗ್ರೆಸ್ ನಾಯಕರು, ರೈತರು ಹಾಗೂ ಕನ್ನಡ ಪರ ಸಂಘಟನೆಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್ ಪ್ರಕರಣಗಳನ್ನ ಅಭಿಯೋಜನೆಯಿಂದ ಹಿಂಪಡೆಯಲು ಸಂಪುಟ ತೀರ್ಮಾನಿಸಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಆಗಸ್ಟ್ 31ರ ವರೆಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್ ನೀಡಿದೆ. ಈ ಹಿನ್ನೆಲೆ ಚುನಾವಣೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಹಾಗೆಯೇ ಚುನಾವಣೆ ಮುಂದೂಡಿಕೆಗೆ ಮತ್ತೇನು ಮಾಡಬಹುದು ಅನ್ನೋದ್ರ ಕುರಿತು ಚರ್ಚಿಸಲಾಗಿದೆ. ಅಷ್ಟೇ ಅಲ್ಲದೇ ನರೇಗಾ ಯೋಜನೆ ಅನುಷ್ಠಾನ ವಿಚಾರದ ಬಗ್ಗೆಯೂ ಚರ್ಚಿಸಲಾಗಿದೆ. VB-GRAMG (ಜೀ ರಾಂಜಿ) ಯೋಜನೆ, ಅನುಷ್ಠಾನವಾಗದ ಕಾರಣ, ನರೇಗಾ ಯೋಜನೆ ಮುಂದುವರಿಕೆಗೆ ಅನುಮತಿ ನೀಡುವಂತೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ.
ಜುಲೈ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮಳೆಗಾಲದ ಅಧಿವೇಶನ ಬೆಳಗಾವಿಗೆ ಶಿಫ್ಟ್ ಆಗಿದೆ. ಬೆಳಗಾವಿ ಸುವರ್ಣಸೌಧಕ್ಕೆ ಮಳೆಗಾಲದ ಅಧಿವೇಶನ ಶಿಫ್ಟ್ ಮಾಡಿ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ʻಎಸ್‌ಐಆರ್ʼ (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ವಿಚಾರವಾಗಿ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಮೇ 24 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಶಾಸಕರು ಹಾಗೂ 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಸಭೆಯೂ ಅಂದೇ ನಡೆಸಲು ತೀರ್ಮಾನಿಸಿದ್ದಾರೆ.


















