ತಿರುನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರೂ ಆಗಿರುವ ತಿರುವನಂಚೂರು ರಾಧಾಕೃಷ್ಣನ್ ಇಂದು (ಶುಕ್ರವಾರ) ಕೇರಳಂ 16ನೇ ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಮತ ಚಲಾಯಿಸದ ಕಾರಣ ರಾಧಾಕೃಷ್ಣನ್ 101 ಮತಗಳನ್ನ ಪಡೆದು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದರು.
140 ಸದಸ್ಯರಲ್ಲಿ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಚುನಾವಣಾ ಅಧಿಕಾರಿ ಆಗಿದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು. ಚಲಾವಣೆಯಾದ 139 ಮತಗಳಲ್ಲಿ, ಯುಡಿಎಫ್ನಿಂದ ಕಣಕ್ಕಿಳಿದ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಸ್ಪೀಕರ್ ಆಗಿ ಆಯ್ಕೆಯಾದರು. ಎಲ್ಡಿಎಫ್ನ ಎಸಿ ಮೊಯ್ದೀನ್ 35 ಮತಗಳನ್ನು ಪಡೆದರೆ, ಬಿಜೆಪಿಯ ಬಿಬಿ ಗೋಪಕುಮಾರ್ 3 ಮತಗಳನ್ನ ಪಡೆದು ನಿರಾಸೆ ಅನುಭವಿಸಿದರು.
76 ವರ್ಷದ ರಾಧಾಕೃಷ್ಣನ್ 1991 ರಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ. 8 ಬಾರಿ ಶಾಸಕರಾಗಿರುವ ಅವರು 2011-2016 ರಲ್ಲಿ ಉಮ್ಮನ್ ಚಾಂಡಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಸಚಿವಾಲಯದ ಉಳಿದ ಅವಧಿಗೆ ಅರಣ್ಯ, ಸಾರಿಗೆ, ಕ್ರೀಡೆ, ಸಿನಿಮಾ ಮತ್ತು ಪರಿಸರ ಖಾತೆಗಳನ್ನ ನಿರ್ವಹಿಸಿದ್ದಾರೆ.
2026 ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾಯಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸುಮಾರು 36,000 ಮತಗಳ ಅಂತರದಿಂದ ಗೆದ್ದಿದ್ದರು. ಚುನಾವಣಾ ಅಫಿಡವಿಟ್ ಪ್ರಕಾರ, ರಾಧಾಕೃಷ್ಣನ್ ಅವರ ಒಟ್ಟು ಆಸ್ತಿ ಮೌಲ್ಯ 3 ಕೋಟಿ ರೂಪಾಯಿ. ಇದರಲ್ಲಿ 12.8 ಲಕ್ಷದಷ್ಟು ಸಾಲ ಹೊಂದಿದ್ದಾರೆ. ವಾರ್ಷಿಕ ಆದಾಯ 10.1 ಲಕ್ಷ ರೂ. ಎಂದು ಘೋಷಿಸಿದ್ದಾರೆ.


















