IPL 2026: ಇಂಡಿಯನ್ ಪ್ರೀಮಿಯರ್ ಲೀಗ್‘ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಕ್ಲಾಸೆನ್, ಈ ಬಾರಿಯ ಐಪಿಎಲ್‘ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಕೇವಲ 24 ಎಸೆತಗಳಲ್ಲಿ 51 ರನ್ ಚಚ್ಚಿದರು. ಅವರ ಇನಿಂಗ್ಸ್‌ನಲ್ಲಿ 5 ಸಿಕ್ಸ್ ಹಾಗೂ 2 ಫೋರ್ ಸೇರಿದ್ದವು.
ಈ ಅರ್ಧಶತಕದೊಂದಿಗೆ ಹೆನ್ರಿಕ್ ಕ್ಲಾಸೆನ್ ಈ ಸೀಸನ್ ಐಪಿಎಲ್ನಲ್ಲಿ ಒಟ್ಟು 600 ರನ್ ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 600+ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಈ ವಿಶೇಷ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. 2018 ರ ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 579 ರನ್ ಗಳಿಸಿದ್ದರು. ಆ ಮೂಲಕ ನಾಲ್ಕನೇ ಕ್ರಮಾಂಕದಲ್ಲಿ 550ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದ್ದರು.
ಈಗ ಹೆನ್ರಿಕ್ ಕ್ಲಾಸೆನ್ ಆ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಈ ಸೀಸನ್ 14 ಇನಿಂಗ್ಸ್ ಆಡಿರುವ ಕ್ಲಾಸೆನ್ ಒಟ್ಟು 606 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಐಪಿಎಲ್ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


















