ಮನೆ ಸುದ್ದಿ ಜಾಲ ದರ್ಶನ್ ಆತ್ಮಹತ್ಯೆ ವದಂತಿ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ದರ್ಶನ್ ಆತ್ಮಹತ್ಯೆ ವದಂತಿ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು (ಮೇ.23): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳ ಕುರಿತು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಜೈಲಿನೊಳಗೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

“ದರ್ಶನ್ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬ ವದಂತಿ ನನ್ನ ಗಮನಕ್ಕೆ ಬಂದ ತಕ್ಷಣವೇ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಜೈಲಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದರ ಹೊರತಾಗಿ ಬೇರೆ ಯಾವುದೇ ವಿಷಯ ಇಲ್ಲ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಭಾನುವಾರ ರಾತ್ರಿ മുതൽ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಆತ್ಮಹತ್ಯೆ ಯತ್ನ ಕುರಿತ ವದಂತಿ ಭಾರೀ ಪ್ರಮಾಣದಲ್ಲಿ ಹರಡಿತ್ತು. ಇದರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದರ್ಶನ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು.

ವದಂತಿ ಹರಡುತ್ತಿದ್ದಂತೆ ಎಚ್ಚೆತ್ತ ಜೈಲು ಅಧಿಕಾರಿಗಳ ತಂಡವು ತಕ್ಷಣವೇ ದರ್ಶನ್ ಇರುವ ಬ್ಯಾರಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಈ ಸುದ್ದಿ ಸಂಪೂರ್ಣ ವದಂತಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.ಈ ಕುರಿತು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿ, “ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿದೆ. ಇಂತಹ ವದಂತಿಗಳನ್ನು ನಂಬಿ ಯಾರೂ ಪರಪ್ಪನ ಅಗ್ರಹಾರ ಜೈಲಿನ ಬಳಿ ಅನಗತ್ಯವಾಗಿ ಬರಬಾರದು” ಎಂದು ಮನವಿ ಮಾಡಿದ್ದಾರೆ.

ಈ ವದಂತಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿಯೂ ಸಹ ಜೈಲಿನ ಸ್ಥಿರ ದೂರವಾಣಿಗೆ ಕರೆ ಮಾಡಿ ಸತ್ಯಾಸತ್ಯತೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆ ಮೈಸೂರಿನ ಮನೋರೋಗ ತಜ್ಞ ಡಾ. ಅಭಿಜಿತ್ ಹನಹೋಡು ಅವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, “ದರ್ಶನ್ ಜೈಲು ವಾತಾವರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಅವರಿಗೆ ಸೂಕ್ತ ಮನೋರೋಗ ಚಿಕಿತ್ಸೆ ಅಗತ್ಯ” ಎಂದು ಹೇಳಿದ್ದರು. ಈ ಹಳೆಯ ಹೇಳಿಕೆಯ ಹಿನ್ನೆಲೆಯಲ್ಲೇ ಹೊಸ ವದಂತಿ ಮತ್ತಷ್ಟು ಚರ್ಚೆಗೆ ಕಾರಣವಾಗಿತ್ತು.ಸದ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಡಿಜಿಪಿ ಅಲೋಕ್ ಕುಮಾರ್ ನೀಡಿರುವ ಅಧಿಕೃತ ಸ್ಪಷ್ಟನೆಯೊಂದಿಗೆ ದರ್ಶನ್ ಆತ್ಮಹತ್ಯೆ ಯತ್ನ ವದಂತಿಗೆ ತೆರೆ ಬಿದ್ದಂತಾಗಿದೆ.