ಲೆಹ್ (ಮೇ.23): ಲಡಾಖ್ನ ಲೆಹ್ ಸಮೀಪದ ಕಠಿಣ ಪರ್ವತ ಪ್ರದೇಶ ತಾಂಗ್ಸ್ಟೆ ಬಳಿ ಭಾರತೀಯ ಸೇನೆಗೆ ಸೇರಿದ ‘ಚೀತಾ’ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಆತಂಕ ಮೂಡಿಸಿದೆ. ಈ ಅವಘಡದಲ್ಲಿ ಮೇಜರ್ ಜನರಲ್ ಹುದ್ದೆಯ ಹಿರಿಯ ಅಧಿಕಾರಿ ಸೇರಿದಂತೆ ಮೂವರು ಸೇನಾ ಅಧಿಕಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸೇನಾ ಮೂಲಗಳು ಶುಕ್ರವಾರ ಖಚಿತಪಡಿಸಿವೆ. ಬುಧವಾರ ಈ ಅಪಘಾತ ಸಂಭವಿಸಿದ್ದರೂ, ಇದೀಗ ತಡವಾಗಿ ಮಾಹಿತಿ ಹೊರಬಂದಿದೆ.
ಅಪಘಾತದ ತೀವ್ರತೆಗೆ ಹೆಲಿಕಾಪ್ಟರ್ ಸಂಪೂರ್ಣ ಹಾನಿಗೊಳಗಾಗಿದ್ದರೂ, ಅದರಲ್ಲಿದ್ದ ಮೂವರು ಅಧಿಕಾರಿಗಳು ಸುರಕ್ಷಿತವಾಗಿ ಹೊರಬಂದಿರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳು ತಮ್ಮದೇ ಕಾಲಿನ ಮೇಲೆ ನಡೆದುಕೊಂಡು ಬಂದಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಈ ಘಟನೆಯನ್ನು ಹಿರಿಯ ಅಧಿಕಾರಿಗಳು “ಪೂರ್ಣ ಪವಾಡ” ಎಂದು ವರ್ಣಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದ್ದವರು ಯಾರು?
ಲಭ್ಯ ಮಾಹಿತಿಯ ಪ್ರಕಾರ, ಪತನಗೊಂಡ ಏಕ ಇಂಜಿನ್ ಚೀತಾ ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಹಾಗೂ ಮೇಜರ್ ಹುದ್ದೆಯ ಅಧಿಕಾರಿಗಳು ಚಲಾಯಿಸುತ್ತಿದ್ದರು. ಹೆಲಿಕಾಪ್ಟರ್ನಲ್ಲಿ ಭಾರತೀಯ ಸೇನೆಯ 3ನೇ ಇನ್ಫಾಂಟ್ರಿ ಡಿವಿಷನ್ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅತಿಥಿ ಪ್ರಯಾಣಿಕರಾಗಿ ತೆರಳುತ್ತಿದ್ದರು. ಅದೃಷ್ಟವಶಾತ್ ಮೂವರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಅಪಘಾತಕ್ಕೆ ನಿಖರ ಕಾರಣ ಪತ್ತೆ ಮಾಡಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಹಳೆಯ ‘ಚೀತಾ’ ಮತ್ತು ‘ಚೇತಕ್’ ಹೆಲಿಕಾಪ್ಟರ್ಗಳಿಗೆ ಶೀಘ್ರ ವಿದಾಯ
ಈ ಘಟನೆ ಬಳಿಕ ಸೇನೆಯಲ್ಲಿ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ಹೆಲಿಕಾಪ್ಟರ್ಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಮುಂದಿನ ಒಂದರಿಂದ ಎರಡು ವರ್ಷಗಳೊಳಗೆ ಭಾರತೀಯ ಸೇನೆ ತನ್ನ ಹಳೆಯ ‘ಚೀತಾ’ ಹಾಗೂ ‘ಚೇತಕ್’ ಹೆಲಿಕಾಪ್ಟರ್ಗಳನ್ನು ಹಂತ ಹಂತವಾಗಿ ಸೇವೆಯಿಂದ ಹೊರತೆಗೆದು ಬಿಡಲು ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 8 ರಿಂದ 10 ವರ್ಷಗಳಲ್ಲಿ ಈ ಹಳೆಯ ಹೆಲಿಕಾಪ್ಟರ್ಗಳ ಸ್ಥಾನವನ್ನು ಅತ್ಯಾಧುನಿಕ ಲಘು ಉಪಯುಕ್ತ ಹೆಲಿಕಾಪ್ಟರ್ಗಳು ಪಡೆದುಕೊಳ್ಳಲಿವೆ. ಹೊಸ ತಂತ್ರಜ್ಞಾನದ ಎಲ್ಯುಹೆಚ್ ಹೆಲಿಕಾಪ್ಟರ್ಗಳನ್ನು ಸೇನೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ.
ಎಚ್ಎಎಲ್ಗೆ ಸಿಗುವ ಸಾಧ್ಯತೆ ಬೃಹತ್ ಹೆಲಿಕಾಪ್ಟರ್ ಆರ್ಡರ್
ಭಾರತೀಯ ಸೇನೆ ತನ್ನ ತುರ್ತು ಕಾರ್ಯಾಚರಣೆ ಅಗತ್ಯತೆಗಳನ್ನು ಪೂರೈಸಲು ಎರಡು ಹಂತದ ಯೋಜನೆ ಸಿದ್ಧಪಡಿಸಿದೆ. ಸ್ವದೇಶಿ ನಿರ್ಮಿತ ಲಘು ಉಪಯುಕ್ತ ಹೆಲಿಕಾಪ್ಟರ್ಗಳನ್ನು ಸೇನೆಗೆ ಸೇರಿಸುವ ಜೊತೆಗೆ, ಕೆಲ ಹೆಲಿಕಾಪ್ಟರ್ಗಳನ್ನು ತಾತ್ಕಾಲಿಕವಾಗಿ ಲೀಸ್ ಆಧಾರದ ಮೇಲೂ ಪಡೆಯಲು ಯೋಜಿಸಲಾಗಿದೆ.
ಭಾರತೀಯ ಸೇನೆಗೆ ಒಟ್ಟಾರೆ ಸುಮಾರು 250 ಹೊಸ ಹೆಲಿಕಾಪ್ಟರ್ಗಳ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಗೆ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯಿಂದ ಒಟ್ಟು 187 ಲಘು ಹೆಲಿಕಾಪ್ಟರ್ಗಳ ಬೃಹತ್ ಆರ್ಡರ್ ಸಿಗುವ ನಿರೀಕ್ಷೆ ಇದೆ.
ಈಗಾಗಲೇ ಸೇನೆ ಪ್ರಾಯೋಗಿಕ ಹಂತದಲ್ಲಿ 6 ಎಲ್ಯುಹೆಚ್ ಹೆಲಿಕಾಪ್ಟರ್ಗಳಿಗೆ ಆದೇಶ ನೀಡಿದೆ. ಈ ಹೊಸ ಹೆಲಿಕಾಪ್ಟರ್ಗಳು ಗಂಟೆಗೆ 220 ಕಿಲೋಮೀಟರ್ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, 6.5 ಕಿಲೋಮೀಟರ್ ಎತ್ತರದವರೆಗೂ ಕಾರ್ಯಾಚರಣೆ ನಡೆಸಬಲ್ಲವು. ಜೊತೆಗೆ ಒಂದು ಬಾರಿ ಸುಮಾರು 350 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ.


















