ಮನೆ ಸುದ್ದಿ ಜಾಲ VTU Result 2026: ಪರೀಕ್ಷೆ ಮುಗಿದ 10 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ಹೊಸ ಇತಿಹಾಸ ನಿರ್ಮಿಸಿದ...

VTU Result 2026: ಪರೀಕ್ಷೆ ಮುಗಿದ 10 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ಹೊಸ ಇತಿಹಾಸ ನಿರ್ಮಿಸಿದ ವಿಟಿಯು

0

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷಾ ಮತ್ತು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಅಂತಿಮ ಸೆಮಿಸ್ಟರ್ ಬಿಇ ಹಾಗೂ ಬಿಟೆಕ್ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲೇ ಪ್ರಕಟಿಸುವ ಮೂಲಕ ವಿಶ್ವವಿದ್ಯಾಲಯ ಗಮನ ಸೆಳೆದಿದೆ.

ವಿಶ್ವವಿದ್ಯಾಲಯದ ಪ್ರಕಟಣೆಯ ಪ್ರಕಾರ, ಒಟ್ಟು 56,192 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಪ್ರಾಯೋಗಿಕ ಪರೀಕ್ಷೆಗಳು ಶುಕ್ರವಾರ ಸಂಜೆ 5.30ಕ್ಕೆ ಪೂರ್ಣಗೊಂಡಿದ್ದು, ಅದರ ಐದು ನಿಮಿಷಗಳಲ್ಲೇ ಅಂಕಗಳ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಯಿತು. ಬಳಿಕ ಕೇವಲ 10 ನಿಮಿಷಗಳಲ್ಲಿ ಫಲಿತಾಂಶ ಸಂಸ್ಕರಣೆ ಪೂರ್ಣಗೊಳಿಸಿ ಅಧಿಕೃತವಾಗಿ ಪ್ರಕಟಿಸಲಾಯಿತು. ಈ ಬಾರಿ ಒಟ್ಟು ಫಲಿತಾಂಶ ಶೇಕಡಾ 99.98 ದಾಖಲಾಗಿದೆ.ಉಪಕುಲಪತಿ ಎಸ್. ವಿದ್ಯಾಶಂಕರ್ ಹಾಗೂ ಮೌಲ್ಯಮಾಪನ ವಿಭಾಗದ ಕುಲಸಚಿವ ಯು.ಜೆ. ಉಜ್ವಲ್ ಅವರು ಜಂಟಿಯಾಗಿ ಫಲಿತಾಂಶ ಪ್ರಕಟಿಸಿದರು.

10 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಲು ಕಾರಣವೇನು?

ವಿಟಿಯು ವ್ಯಾಪ್ತಿಯ 220 ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸಿದ್ಧಾಂತ ಪರೀಕ್ಷೆಗಳು ಮೇ ಮೊದಲ ವಾರದಲ್ಲೇ ಪೂರ್ಣಗೊಂಡಿದ್ದವು. ಉತ್ತರ ಪತ್ರಿಕೆಗಳನ್ನು ಮುಂಚಿತವಾಗಿಯೇ ಡಿಜಿಟಲ್ ವಿಧಾನದಲ್ಲಿ ಮೌಲ್ಯಮಾಪನ ಮಾಡಿ ದಾಖಲು ಮಾಡಲಾಗಿತ್ತು.ಶುಕ್ರವಾರ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆದವು. ಪರೀಕ್ಷೆ ಮುಗಿದ ಕೂಡಲೇ ಅಂಕಗಳನ್ನು ಆನ್‌ಲೈನ್ ಮೂಲಕ ಸಂಗ್ರಹಿಸಿ, ಅತ್ಯಾಧುನಿಕ ತಂತ್ರಜ್ಞಾನ ಸಹಾಯದಿಂದ ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಲಾಯಿತು.

ಉಪಕುಲಪತಿ ಪ್ರೊ. ವಿದ್ಯಾಶಂಕರ್ ಮಾತನಾಡಿ, ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆಗೆ ವಿಟಿಯು ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಅವಕಾಶಗಳಿಗಾಗಿ ಫಲಿತಾಂಶ ನಿರೀಕ್ಷಿಸುತ್ತಿರುವುದರಿಂದ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಈ ಸಾಧನೆಗೆ ಪರೀಕ್ಷಾ ವಿಭಾಗದ ಸಿಬ್ಬಂದಿ, ಆಡಳಿತಾಧಿಕಾರಿಗಳು ಹಾಗೂ ಸಂಯೋಜಿತ ಕಾಲೇಜುಗಳ ಸಹಕಾರ ಪ್ರಮುಖ ಕಾರಣ ಎಂದು ಅವರು ತಿಳಿಸಿದರು.

ಕಳೆದ ವರ್ಷಕ್ಕಿಂತ ವೇಗವಾಗಿ ಫಲಿತಾಂಶ

ಕುಲಸಚಿವ ಯು.ಜೆ. ಉಜ್ವಲ್ ಮಾಹಿತಿ ನೀಡುತ್ತಾ, ಡಿಜಿಟಲ್ ಮೌಲ್ಯಮಾಪನ ಹಾಗೂ ಪೂರ್ವ ಸಿದ್ಧತೆಯಿಂದ ಫಲಿತಾಂಶವನ್ನು ಅತೀ ವೇಗವಾಗಿ ಪ್ರಕಟಿಸಲು ಸಾಧ್ಯವಾಯಿತು ಎಂದರು. ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ನೇರವಾಗಿ ಫಲಿತಾಂಶ ರವಾನೆಯೂ ಮಾಡಲಾಗಿದೆ ಎಂದು ಹೇಳಿದರು. ಕಳೆದ ವರ್ಷ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಪ್ರಕಟಿಸಲಾಗಿತ್ತು. 2024ರಲ್ಲಿ 37,011 ವಿದ್ಯಾರ್ಥಿಗಳ ಫಲಿತಾಂಶ ಮೂರು ಗಂಟೆಗಳಲ್ಲಿ ಪ್ರಕಟವಾಗಿದ್ದರೆ, 2023ರಲ್ಲಿ 43,662 ವಿದ್ಯಾರ್ಥಿಗಳ ಫಲಿತಾಂಶ ಎರಡು ದಿನಗಳ ನಂತರ ಪ್ರಕಟಿಸಲಾಗಿತ್ತು.