ಬೀಜಿಂಗ್: ಚೀನಾದ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟ ದುರಂತ ದೇಶದಾದ್ಯಂತ ಆತಂಕ ಸೃಷ್ಟಿಸಿದೆ. ಈ ಅವಘಡದಲ್ಲಿ ಕನಿಷ್ಠ 82 ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ 9 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 7.29 ಗಂಟೆ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ಮಾಹಿತಿ ನೀಡಿದೆ.
ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಗಣಿಯಲ್ಲಿ ಒಟ್ಟು 247 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನ ಮಂದಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ, ದುರಂತದಲ್ಲಿ 82 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಉಳಿದ 9 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಚೀನಾದ ಸರ್ಕಾರಿ ವಾಹಿನಿ ಸಿಸಿಟಿವಿ ಬಿಡುಗಡೆ ಮಾಡಿದ ದೃಶ್ಯಗಳಲ್ಲಿ, ಗಾಯಾಳು ಕಾರ್ಮಿಕರನ್ನು ಸ್ಟ್ರೆಚರ್ ಮೂಲಕ ಹೊರತೆಗೆದುಕೊಳ್ಳುತ್ತಿರುವುದು ಹಾಗೂ ಸ್ಥಳದಲ್ಲಿ ಆಂಬುಲೆನ್ಸ್ ವಾಹನಗಳು ಸಜ್ಜಾಗಿರುವುದು ಕಂಡುಬಂದಿದೆ.
ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವಂತೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ದುರಂತದ ಕುರಿತು ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದಾರೆ.
“ಈ ಘಟನೆಗಳಿಂದ ಎಲ್ಲಾ ಪ್ರದೇಶಗಳು ಮತ್ತು ಇಲಾಖೆಗಳು ಪಾಠ ಕಲಿಯಬೇಕು. ಕೈಗಾರಿಕಾ ಸುರಕ್ಷತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಇಂತಹ ಭಾರೀ ದುರಂತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ” ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಸ್ಫೋಟಕ್ಕೆ ಕಾರಣವಾದ ಕಂಪನಿಯ ಮಾಲೀಕನನ್ನು ಕಾನೂನು ಕ್ರಮದಡಿ ವಶಕ್ಕೆ ಪಡೆಯಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಆರಂಭಿಕ ವರದಿಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಣಿಯೊಳಗೆ ಕಾರ್ಬನ್ ಮಾನೋಆಕ್ಸೈಡ್ ಪ್ರಮಾಣ ಹೆಚ್ಚಿರುವುದು ಪತ್ತೆಯಾದ ನಂತರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಗಣಿಯೊಳಗೆ ಸಿಲುಕಿದ್ದ ಕೆಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಶಾಂಕ್ಸಿ ಪ್ರಾಂತ್ಯವು ದೇಶದ ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಗಣಿಗಳ ಸುರಕ್ಷತೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ನಿಯಂತ್ರಣದ ಕೊರತೆಯಿಂದ ಇಂತಹ ಅಪಘಾತಗಳು ಮರುಕಳಿಸುತ್ತಿವೆ.
2023ರಲ್ಲಿ ಉತ್ತರ ಒಳ ಮಂಗೋಲಿಯಾ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 53 ಮಂದಿ ಮೃತಪಟ್ಟಿದ್ದರು. ಅದೇ ರೀತಿ 2009ರಲ್ಲಿ ಹೀಲೋಂಗ್ಜಿಯಾಂಗ್ ಪ್ರಾಂತ್ಯದ ಗಣಿಯಲ್ಲಿ ನಡೆದ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

















