ಮನೆ ಸುದ್ದಿ ಜಾಲ ದೊಡ್ಮನ್ಸ  : ವಿಷ್ಣು ಸರ್​​ ಅವರ ದೊಡ್ಮನ್ಸ ಟೈಟಲ್​ ನಮಗೆ ಸಿಕ್ಕಿದ್ದು ಅದೃಷ್ಟ

ದೊಡ್ಮನ್ಸ  : ವಿಷ್ಣು ಸರ್​​ ಅವರ ದೊಡ್ಮನ್ಸ ಟೈಟಲ್​ ನಮಗೆ ಸಿಕ್ಕಿದ್ದು ಅದೃಷ್ಟ

0

ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರೋದು ಒಂದು ದೊಡ್ಡ ಚಾಲೆಂಜ್. ಬಿಡುಗಡೆಗೂ ಮುನ್ನ ನಡೆಯುವ ಪ್ರಚಾರ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದರಂತೆ ಸಿನಿಮಾವೊಂದಕ್ಕೆ ಇಡುವ ಹೆಸರು, ನಂತರ ಅನಾವರಣಗೊಳ್ಳುವ ಗ್ಲಿಂಪ್ಸ್, ಟೀಸರ್, ಟ್ರೇಲರ್​, ಹಾಡುಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿರುತ್ತದೆ. ಅದರಂತೆ ಇದೀಗ ‘ದೊಡ್ಮನ್ಸ’ ಶೀರ್ಷಿಕೆಯಲ್ಲಿ ಸಿನಿಮಾವೊಂದು ರೆಡಿಯಾಗುತ್ತಿದೆ. ಹೌದು, ಕೆಲವೊಮ್ಮೆ ಸಿನಿಮಾ ಟೈಟಲ್ ಚಿತ್ರದ ಕಥೆಗೆ ಬಹಳ ಮುಖ್ಯ ಆಗುತ್ತೆ. ಇಲ್ಲೊ‌ಂದು ಚಿತ್ರತಂಡ ದೊಡ್ಮನ್ಸ ಎಂಬ ಟೈಟಲ್ ಇಟ್ಟುಕೊಂಡು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಶರತ್ ಕೃಷ್ಣ ಎಂಬ ಯುವ ಪ್ರತಿಭೆ ನಟಿಸಿ, ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಣಯ ಗೀತೆ ಅನಾವರಣಗೊಂಡಿದ್ದು ಪ್ರೇಮಿಗಳಿಬ್ಬರ ಗೀತೆ ಮನಸ್ಸಿಗೆ ಮುದ ನೀಡುವಂತಿದೆ. ಶರತ್ ಹಾಗೂ ರೇಷ್ಮಾ ಕೆಮಿಸ್ಟ್ರಿ ವರ್ಕ್​​ಔಟ್​ ಆಗಿದೆ. ಗುಜರಾತ್​​ನಲ್ಲಿ ಶೂಟ್ ಮಾಡಿರೋದು ವಿಶೇಷ. ಈ ಚಿತ್ರದಲ್ಲಿ ಶರತ್ ಕೃಷ್ಣ ಜೊತೆ ಮತ್ತೋರ್ವ ನಟಿ ಶಿಲ್ಪಾ ಕೂಡಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ನಟ-ನಿರ್ದೇಶಕ ಶರತ್ ಕೃಷ್ಣ ಮಾತನಾಡಿ, ”ದೊಡ್ಮನ್ಸ ಎಂಬ ಟೈಟಲ್ ನೋಡೋಕೆ ಖುಷಿಯಾಗುತ್ತದೆ. ಏಕೆಂದರೆ ಈ ಟೈಟಲ್ ವಿಷ್ಣು ಸರ್​ಗೆ ಇದ್ದದ್ದು. ನಮಗೆ ಸಿಕ್ಕಿದ್ದು ಬಹಳ ಖುಷಿ. ಎಸ್.ನಾರಾಯಣ್ ಸರ್ ನಮ್ಮ ಸ್ಟುಡಿಯೋಗೆ ಬಂದಾಗ ಈ ಟೈಟಲ್ ನೋಡಿ ನಮ್ಮನ್ನು ಅಪ್ರಿಷಿಯೇಟ್​ ಮಾಡಿದ್ದರು. ಎಸ್ ನಾರಾಯಣ್ ಸರ್ ಆ ಟೈಮಲ್ಲಿ ಈ ಟೈಟಲ್​​ನೊಂದಿಗೆ ವಿಷ್ಣು ಸರ್​ಗೆ ಸಿನಿಮಾ ಮಾಡೋದಕ್ಕೆ ಹೊರಟಿದ್ದರಂತೆ. ಆದ್ರೆ ಅದು ಆಗಲಿಲ್ಲ ಅಂತಾ ಅವರು ಹೇಳಿದಾಗಲೇ ಗೊತ್ತಾಗಿದ್ದು” ಎಂದು ತಿಳಿಸಿದರು. ”ದುಡ್ಡಿದ್ದೋರಲ್ಲ ಗುರು ದೊಡ್ಡ ಮನ್ಸ, ದೊಡ್ಡ ಮನಸ್ಸಿದ್ದೋನೆ ದೊಡ್ಮನ್ಸ ಅನ್ನೋದನ್ನು ಹೇಳುವ ಕಥೆ ಇದು. ಆಟೋ ಡ್ರೈವರ್​ಗಳಿಗೆ 8 ಜಿಲ್ಲೆಗಳಲ್ಲಿ ಒಂದು ಸ್ಪೆಷಲ್ ಶೋ ಇಟ್ಟಿದ್ದೇವೆ. ಅದಕ್ಕೆ ಆದಂತ ಆ್ಯಪ್ ಅನ್ನು ರೆಡಿ ಮಾಡಿದ್ದೇವೆ. ಇದರ ಜೊತೆಗೆ ಲಕ್ಕಿ ಡ್ರಿಪ್ ಮಾಡಿ, ಗೆದ್ದ ಓರ್ವ ಚಾಲಕನಿಗೆ ಒಂದು ಆಟೋ ಕೊಡಲಿದ್ದೇವೆ” ಎಂದು ಮಾಹಿತಿ ನೀಡಿದರು. ಬಳಿಕ ನಟಿ ರೇಷ್ಮಾ ಮಾತನಾಡಿ, ”ತುಂಬಾ ಇಷ್ಟಪಟ್ಟು, ತುಂಬಾ ಭರವಸೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ನಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುವುದೆಲ್ಲವನ್ನೂ ಮೀರಿ ಗೆಲ್ಲುವುದೇ ಜೀವನ. ನಾನಿಲ್ಲಿ ಸ್ನೇಹ ಎಂಬ ಪಾತ್ರ ನಿರ್ವಹಿಸಿದ್ದೇನೆ.

ಮಿಡಲ್ ಕ್ಲಾಸ್ ಹುಡುಗಿ. ಓರ್ವ ಆಟೋ ಡ್ರೈವರ್ ಅನ್ನು ಇಷ್ಟಪಟ್ಟಾಗ ಏನೆಲ್ಲಾ ಆಗುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಿದ್ದೇವೆ” ಎಂದು ತಿಳಿಸಿದರು. ಮತ್ತೋರ್ವ ನಟಿ ಶಿಲ್ಪಾ ಶಿವಕುಮಾರ್ ಮಾತನಾಡಿ, “ಈ ಸಿನಿಮಾದಲ್ಲಿ ನನ್ನದು ಪುಟ್ಟ ಪಾತ್ರ. ಆದರೆ ಪ್ರಾಮುಖ್ಯತೆ ಹೆಚ್ಚು. ನನಗೆ ಸಾಂಗ್ ಇಲ್ಲ ಅಂತಾ ನಮ್ಮ ನಿರ್ದೇಶಕರ ಹತ್ರ ಕೇಳಿದ್ದೆ. ಆಗ ಸಾಂಗ್ ಇಲ್ಲದೇ ಹೋದರೂ ಫೈಟ್ ಇದೆ ಅಂದಿದ್ದರು. ನನಗೋಸ್ಕರ ಫೈಟ್​ ಮಾಡ್ತಾರೆ” ಅಂತಾ ತಮಾಷೆ ಮಾಡಿದ್ರು. ನಿರ್ಮಾಪಕ ವೇದಿಕ್ ವೀರ ಮಾತನಾಡಿ, “ದೊಡ್ಮನ್ಸ ದೊಡ್ಡದಾಗಿದೆ. ಒಳ್ಳೊಳ್ಳೆ ಕಂಟೆಂಟ್ ಜನರಿಗೆ ರೀಚ್ ಆಗಬೇಕು ಅನ್ನೋದು ಆಸೆ. ಪ್ರತೀ ಹಂತದಲ್ಲೂ ಏನೇನು ಬೇಕೋ ಅದೆಲ್ಲವನ್ನೂ ನೀಡಿದ್ದೇವೆ. ಎಲ್ಲರೂ ಸೇರಿ ಈ ಸಿನಿಮಾ ಮಾಡಿದ್ದೇವೆ” ಎಂದು ತಿಳಿಸಿದ್ರು. ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರದಲ್ಲಿ ಬಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ಹಾಡೊಂದನ್ನು ರಿಲೀಸ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ ಎಂದು ತಿಳಿದುಬಂದಿದೆ.