ವಾಷಿಂಗ್ಟನ್ ಡಿಸಿ, ಅಮೆರಿಕ: ಜಾಗತಿಕ ವಿದ್ಯಮಾನಗಳು ಹಾಗೂ ಇರಾನ್ನೊಂದಿಗಿನ ಸಂಘರ್ಷದಿಂದಾಗಿ ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹವನ್ನು ಮಿಸ್ ಮಾಡಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಪಾಮ್ ಬೀಚ್‌ನಲ್ಲಿ ನಡೆಯುವ ತಮ್ಮ ಮಗನ ವಿವಾಹದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದೇ ಸರ್ಕಾರಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಉಲ್ಲೇಖಿಸಿ, ಈ ಮಹತ್ವದ ಅವಧಿಯಲ್ಲಿ ನಾನು ಶ್ವೇತಭವನದಲ್ಲಿ ಉಳಿಯುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಅವರು, ನನ್ನ ಮಗ ಡಾನ್ ಜೂನಿಯರ್ ಮತ್ತು ಟ್ರಂಪ್ ಕುಟುಂಬದ ಹೊಸ ಸದಸ್ಯೆ ಆತನ ಪತ್ನಿ ಬೆಟ್ಟಿನಾ ಅವರೊಂದಿಗೆ ಇರಲು ನಾನು ತುಂಬಾ ಬಯಸಿದ್ದೆ. ಆದರೆ, ಸರ್ಕಾರದ ಸಂದರ್ಭಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮೇಲಿನ ನನ್ನ ಪ್ರೀತಿ ನನಗೆ ಹಾಗೆ ಮಾಡಲು ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ.
ಈ ಮಹತ್ವದ ಅವಧಿಯಲ್ಲಿ ನಾನು ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತಭವನದಲ್ಲಿ ಉಳಿಯುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಡಾನ್ ಮತ್ತು ಬೆಟ್ಟಿನಾಗೆ ಅಭಿನಂದನೆಗಳು ಎಂದು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಹಾರೈಸಿದ್ದಾರೆ. ಮೂಲತಃ ಅವರು ಈ ವಾರಾಂತ್ಯವನ್ನು ತಮ್ಮ ನ್ಯೂಜೆರ್ಸಿ ಗಾಲ್ಫ್ ಕ್ಲಬ್‌ನಲ್ಲಿ ಕಳೆಯಲು ನಿರ್ಧರಿಸಿದ್ದರು ಎಂದು ಪೊಲಿಟಿಕೊ ವರದಿ ಮಾಡಿದೆ. ಪೊಲಿಟಿಕೊ ಪ್ರಕಾರ ಟ್ರಂಪ್ ಜೂನಿಯರ್ ಮತ್ತು ಆಂಡರ್ಸನ್ ಅವರ ವಿವಾಹವು ಬಹಾಮಾಸ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರ ಸಣ್ಣ ಗುಂಪಿನೊಂದಿಗೆ ನಡೆಯುವ ಸರಳ ಮತ್ತು ಆತ್ಮೀಯ ಸಮಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಂಗಳವಾರ ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ ಎಂದು ಪೊಲಿಟಿಕೊ ಉಲ್ಲೇಖಿಸಿದೆ. ಆದರೆ, ಮಧ್ಯಪ್ರಾಚ್ಯ ಮಿತ್ರರಾಷ್ಟ್ರಗಳು ಮಾತುಕತೆಗಳನ್ನು ಮುಂದುರೆಸಲು ಅವಕಾಶ ನೀಡುವಂತೆ ಒತ್ತಾಯಿಸಿದ ಬಳಿಕ ಅವರ ಯೋಚನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇರಾನ್ ಹೊರತುಪಡಿಸಿ ವಾಷಿಂಗ್ಟನ್‌ನ ಕೆಲವು ಅಧಿಕಾರಿಗಳು ಕ್ಯೂಬಾ ವಿರುದ್ಧ ಮಿಲಿಟರಿ ದಾಳಿಗಳ ವಿಚಾರ ಟ್ರಂಪ್ ಮುಂದಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
















