ಮನೆ ಸುದ್ದಿ ಜಾಲ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್‌ಗೆ ನಟಿ ತನಿಷಾ ಕುಪ್ಪಂಡ ಖಡಕ್ ವಾರ್ನಿಂಗ್!

ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್‌ಗೆ ನಟಿ ತನಿಷಾ ಕುಪ್ಪಂಡ ಖಡಕ್ ವಾರ್ನಿಂಗ್!

0

ಬೆಂಗಳೂರು:ಕನ್ನಡ ಬಿಗ್ ಬಾಸ್ ಸೀಸನ್ 10 ರ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ತನಿಷಾ ಕುಪ್ಪಂಡ ಅವರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡ ಫೋಟೋಗ್ರಾಫರ್ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಹಿಳಾ ಕಲಾವಿದರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕಿರುಕುಳ ಹಾಗೂ ತೇಜೋವಧೆಯ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.

ಇತ್ತೀಚೆಗಷ್ಟೇ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ನಕಲಿ ಬಿಕಿನಿ ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ತನಿಷಾ ಕುಪ್ಪಂಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಯಾರೂ ನನ್ನ ತಾಳ್ಮೆ ಪರೀಕ್ಷಿಸಬೇಡಿ!
ತಮ್ಮ ಸ್ಟೇಟಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ತನಿಷಾ, “ಕೆಲವು ಕೆಟ್ಟ ಫೋಟೋಗ್ರಾಫರ್‌ಗಳು ಕಲಾವಿದರ ಬಳಿ ಬಂದು ನಾನ್ಸೆನ್ಸ್ ಮಾತನಾಡುತ್ತಾರೆ. ನಿಮಗೆ ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲದಿದ್ದರೆ ಆ ಬಗ್ಗೆ ಕೇಳಲು ಬರಬೇಡಿ. ನಿಮ್ಮಂತಹ ಥರ್ಡ್ ಕ್ಲಾಸ್ ಫೋಟೋಗ್ರಾಫರ್‌ಗಳಿಂದ ಇಡೀ ಛಾಯಾಗ್ರಹಣ ರಂಗಕ್ಕೆ ಹಾಗೂ ಇತರ ಒಳ್ಳೆಯ ಫೋಟೋಗ್ರಾಫರ್‌ಗಳಿಗೆ ಅವಮಾನವಾಗುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಿಲ್ ಕುಮಾರ್ ಎಂಬ ಛಾಯಾಗ್ರಾಹಕ ಫೋಟೋಗ್ರಫಿ ನೆಪದಲ್ಲಿ ತನ್ನನ್ನು ಡೇಟ್‌ಗೆ ಕರೆದಿದ್ದಾನೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ “ಯಾರೂ ಕೂಡ ನನ್ನ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ” ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.

ಬಿಗ್ ಬಾಸ್ ಮನೆಯಲ್ಲೂ ಸಹ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವಕ್ಕೆ ಹೆಸರಾಗಿದ್ದ ತನಿಷಾ, ಈಗ ಇಂಟರ್ನೆಟ್ ಲೋಕದ ಕಿಡಿಗೇಡಿಗಳ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇಂತಹ ಜಾಲಕ್ಕೆ ಬ್ರೇಕ್ ಬೀಳಲೇಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, ತನಿಷಾ ಅವರ ಈ ಖಡಕ್ ಸಂದೇಶ ಸದ್ಯ ಗಾಂಧಿನಗರದ ವಲಯದಲ್ಲಿ ಭಾರಿ ವೈರಲ್ ಆಗುತ್ತಿದೆ.