ಬೆಂಗಳೂರು, ಮೇ 23: ಸಿಲಿಕಾನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರು ನಗರದಲ್ಲಿ ಪುಂಡರ ಕಾಟ ಹೆಚ್ಚುತ್ತಿರುವ ಘಟನೆ ಮತ್ತೊಮ್ಮೆ ದಾಖಲಾಗಿದೆ. ಮೇ 22 ರಂದು ಮಧ್ಯರಾತ್ರಿ ನಗರದ ಡಬಲ್ ರೋಡ್ ಪ್ರದೇಶದಲ್ಲಿ ಉಬರ್ ಕ್ಯಾಬ್ ಚಾಲಕನ ಮೇಲೆ ಮತ್ತೊಬ್ಬ ಕ್ಯಾಬ್ ಚಾಲಕ ಹಾಗೂ ಆತನ ಗ್ಯಾಂಗ್ ಸೇರಿ ಕಾರನ್ನು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಗ್ಯಾಂಗ್ ಸದಸ್ಯರು ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ತಡೆದು ನಿಲ್ಲಿಸಿ, ಚಾಲಕನನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಆತನ ಮೇಲೆ ಹಿಗ್ಗಾಮುಗ್ಗಾ ಥಳಿತ ನಡೆಸಲಾಗಿದೆ. ಈ ವೇಳೆ ಪಕ್ಕದಲ್ಲೇ ಯುವತಿಯೊಬ್ಬರು ಇದ್ದರೂ ದಾಳಿಕೋರರು ಯಾವುದೇ ಭಯವಿಲ್ಲದೆ ಹಲ್ಲೆ ಮುಂದುವರಿಸಿದ್ದಾರೆ.ಈ ಹಲ್ಲೆಯ ಭಯಾನಕ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಘಟನೆಯ ಗಂಭೀರತೆ ಹೆಚ್ಚಿಸಿದೆ. ಹಲ್ಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇ 22 ರಂದು ನಡೆದಿದ್ದರೂ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.ಇದೇ ವೇಳೆ, ದೂರು ದಾಖಲಾಗದಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೆ.ಎಚ್. ರಸ್ತೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿಗೆ ಒಳಗಾದ ಉಬರ್ ಕ್ಯಾಬ್ ಹಾಗೂ ಆರೋಪಿಗಳ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.


















