ಮನೆ ರಾಜ್ಯ ನಾಗಮಲೆ ಬಾಲಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ; 14 ದಿನಗಳ ನಿರಂತರ ಕಾರ್ಯಾಚರಣೆಯಲ್ಲಿ ಅರಣ್ಯ...

ನಾಗಮಲೆ ಬಾಲಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ; 14 ದಿನಗಳ ನಿರಂತರ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಯಶಸ್ವಿ

0

ಮೈಸೂರು: ಮಲೆ ಮಹದೇಶ್ವರ ಬೆಟ್ಟ (MM Hills) ಸಮೀಪದ ನಾಗಮಲೆ ಪ್ರದೇಶದಲ್ಲಿ 10 ವರ್ಷದ ಬಾಲಕನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ 14 ದಿನಗಳಿಂದ ನಡೆದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಚಿರತೆ ಬೋನಿಗೆ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ನಾಗಮಲೆ ಸುತ್ತಮುತ್ತ ಹಲವು ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಜೊತೆಗೆ, ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯಾಚರಣೆ ಮುಂದುವರಿಸಿತ್ತು.ಇತ್ತೀಚಿನ ದಿನಗಳಲ್ಲಿ ಇದೇ ಚಿರತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಶಂಕೆಯೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.

ಘಟನೆಯ ನಂತರ ನಾಗಮಲೆ ಭಾಗಕ್ಕೆ ತೆರಳುವ ಟ್ರೆಕ್ಕಿಂಗ್ ಹಾಗೂ ಪಾದಯಾತ್ರೆ ಮಾರ್ಗಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿತ್ತು. ಭಕ್ತರು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಎಚ್ಚರಿಕಾ ಕ್ರಮ ಕೈಗೊಂಡಿತ್ತು.ಮೃತ ಬಾಲಕ ಹರ್ಷಿತ್ (10) ಬೆಂಗಳೂರಿನ ಲಗ್ಗೆರೆ ನಿವಾಸಿಯಾಗಿದ್ದು, ಮೇ 9ರಂದು ಕುಟುಂಬದೊಂದಿಗೆ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನು. ದೇವರ ದರ್ಶನದ ಬಳಿಕ ಕುಟುಂಬ ಸದಸ್ಯರು ಅಲ್ಲಿಯೇ ರಾತ್ರಿ ತಂಗಿದ್ದರು.ಮೇ 10ರಂದು ನಾಗಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನನ್ನು ಕಾಡಿನೊಳಗೆ ಎಳೆದೊಯ್ದಿತ್ತು. ಬಳಿಕ ಸುಮಾರು ಅರ್ಧ ಗಂಟೆಯ ಶೋಧ ಕಾರ್ಯಾಚರಣೆಯ ನಂತರ ಕಾಡಿನ ಬಂಡೆಗಳ ಮಧ್ಯೆ ಬಾಲಕನ ಮೃತದೇಹ ಪತ್ತೆಯಾಗಿತ್ತು.

ಈ ಘಟನೆ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಚಿರತೆಯನ್ನು ತಕ್ಷಣ ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಇದೀಗ ಚಿರತೆ ಸೆರೆಗೆ ಸಿಕ್ಕಿರುವುದರಿಂದ ಸ್ಥಳೀಯರು ಹಾಗೂ ಭಕ್ತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.