ಬೆಂಗಳೂರು, ಮೇ 25: ನಗರ ಹೊರವಲಯದಲ್ಲಿ ತಡರಾತ್ರಿ ನಡೆದ ಘಟನೆ ಆತಂಕ ಸೃಷ್ಟಿಸಿದೆ. ವಿಮಾನ ನಿಲ್ದಾಣದಿಂದ ಸ್ನೇಹಿತನನ್ನು ಕರೆದುಕೊಂಡು ಬರುತ್ತಿದ್ದ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನನ್ನು ಮರ್ಸಿಡಿಸ್ ಬೆಂಜ್ (Mercedes-Benz) ಕಾರಿನಲ್ಲಿ ಬಂದ ಗ್ಯಾಂಗ್ ಅಪಹರಿಸಿ, ಚಾಕು ಹಾಗೂ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿ ನಗದು ಮತ್ತು ಮೊಬೈಲ್ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳ ವಿಚಾರದಲ್ಲಿ ನಡೆದ ಗಲಾಟೆಯೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ರಫೀಕ್ (30) ಕೇರಳ ಮೂಲದವರಾಗಿದ್ದು, ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೇ 21ರ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ರಫೀಕ್ ತಮ್ಮ ಸ್ನೇಹಿತ ದೀಪಕ್ ಅವರನ್ನು ಪಿಕ್ ಅಪ್ ಮಾಡಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA)ಕ್ಕೆ ತೆರಳಿದ್ದರು. ದೀಪಕ್ ಅವರನ್ನು ಕರೆದುಕೊಂಡು ಹಿಂದಿರುಗುತ್ತಿದ್ದ ವೇಳೆ ಬೇಗೂರು ಸಮೀಪ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ 5 ರಿಂದ 6 ಮಂದಿಯ ತಂಡ ಇವರ ಕ್ಯಾಬ್ ಅನ್ನು ಅಡ್ಡಗಟ್ಟಿದೆ.
ಚಾಕು ತೋರಿಸಿ ಕಿಡ್ನ್ಯಾಪ್, ಹಣ ದರೋಡೆ
ಕಾರಿನಿಂದ ಇಳಿದ ದುಷ್ಕರ್ಮಿಗಳು ಚಾಕು ಮತ್ತು ಇತರೆ ಮಾರಕಾಸ್ತ್ರಗಳನ್ನು ತೋರಿಸಿ ರಫೀಕ್ ಅವರನ್ನು ಬಲವಂತವಾಗಿ ಬೆಂಜ್ ಕಾರಿಗೆ ಕರೆದೊಯ್ದಿದ್ದಾರೆ. ಬಳಿಕ ಅವರ ಬಳಿಯಿದ್ದ 21 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ನಗರದತ್ತ ತೆರಳಿದ್ದಾರೆ. ನಂತರ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ರಫೀಕ್ ಮೂಲಕ ಜಾಬಿರ್ ಎಂಬ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿಸಿದ್ದಾರೆ. ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ ಜಾಬಿರ್ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳುವ ಯತ್ನ ಮಾಡಿದ್ದಾರೆ.
ಸ್ನೇಹಿತ ಕರೆ ಮಾಡಿದ್ದರಿಂದ ತಕ್ಷಣ ಸ್ಥಳಕ್ಕೆ ಬಂದ ಜಾಬಿರ್ ಮೇಲೂ ಗ್ಯಾಂಗ್ ದಾಳಿ ನಡೆಸಿದೆ. ಕಬ್ಬಿಣದ ರಾಡ್ಗಳಿಂದ ಬೆದರಿಸಿ ಇಬ್ಬರನ್ನೂ ಖಾಲಿ ಸೈಟ್ಗೆ ಕರೆದೊಯ್ದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ನಡುವೆ ರಫೀಕ್ ಅಲ್ಲಿಂದ ತಪ್ಪಿಸಿಕೊಂಡು ಆಟೋ ರಿಕ್ಷಾದ ಮೂಲಕ ತಮ್ಮ ಕೊಠಡಿಗೆ ತಲುಪಿದ್ದಾರೆ. ಬಳಿಕ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಸ್ನೇಹಿತನ ಮೊಬೈಲ್ ಮೂಲಕ ಪೊಲೀಸ್ ಹೆಲ್ಪ್ಲೈನ್ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ತನಿಖೆ ಆರಂಭ
ಮಾಹಿತಿ ಪಡೆದ ಸಂಪಿಗೆಹಳ್ಳಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಗಾಯಗೊಂಡಿದ್ದ ಜಾಬಿರ್ ಅವರನ್ನು ರಕ್ಷಿಸಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದಾಗಿ ಜಾಬಿರ್ ಕಿವಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದ ಆರೋಪಿಗಳು ಮತ್ತು ದೂರುದಾರರಿಗೆ ಮೊದಲೇ ಪರಿಚಯ ಇರಲಿಲ್ಲ. ಆದರೆ ಮಹಿಳೆಯೊಬ್ಬಳ ವಿಚಾರದಲ್ಲಿ ಉಂಟಾದ ವೈಷಮ್ಯದಿಂದಲೇ ಅಪಹರಣ ಮತ್ತು ದರೋಡೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈಗಾಗಲೇ ಕೆಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.


















