ಬೆಂಗಳೂರು: ನಟಿ ಕಾವ್ಯಾ ಶೈವ ಅವರಿಗೆ ‘ಬಿಗ್ ಬಾಸ್’ ಕಾರ್ಯಕ್ರಮದ ಬಳಿಕ ಅಪಾರ ಜನಪ್ರಿಯತೆ ಸಿಕ್ಕಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಕಾವ್ಯಾ ಶೈವ ಅವರಿಗೆ ಇದೀಗ ಕಲಬುರಗಿಯಲ್ಲಿ ನಡೆದ ಘಟನೆಯೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವೇದಿಕೆಯ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲೇ ವ್ಯಕ್ತಿಯೊಬ್ಬರು ಅವರ ಕೈಯಿಂದ ಮೈಕ್ ಕಿತ್ತುಕೊಂಡ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವ್ಯಾ ಶೈವ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ಅವರು ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದರು. ವೇದಿಕೆಯ ಮೇಲೆ ನಿಲ್ಲಲು ಸಹ ಸರಿಯಾದ ಜಾಗ ಇರಲಿಲ್ಲ. ಆದರೂ ಕಾವ್ಯಾ ಶೈವ ಮಾತನಾಡುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ಏಕಾಏಕಿ ಅವರ ಕೈಯಿಂದ ಮೈಕ್ ಕಸಿದುಕೊಂಡಿದ್ದಾರೆ. ಈ ಘಟನೆ ಬಳಿಕ ವೇದಿಕೆಯ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಾತನಾಡುತ್ತಿದ್ದ ವೇಳೆ ಏಕಾಏಕಿ ಮೈಕ್ ಕಿತ್ತುಕೊಂಡಿದ್ದನ್ನು ಕಂಡು ಕಾವ್ಯಾ ಶೈವ ಕ್ಷಣಕಾಲ ಅಚ್ಚರಿಗೆ ಒಳಗಾದರು. ಆದರೆ ಅವರು ಯಾವುದೇ ರೀತಿಯ ಕೋಪವನ್ನು ಹೊರಹಾಕಲಿಲ್ಲ. ಕಾವ್ಯಾ ಶೈವಾಗೆ ಆಗಿರುವ ಅವಮಾನ ಕುರಿತು ಸಂಘಟಕರೊಬ್ಬರು ಪ್ರಶ್ನೆ ಎತ್ತಿದ್ದಾರೆ. ಮೈಕ್ ಕಿತ್ತುಕೊಂಡ ವ್ಯಕ್ತಿ ಮತ್ತು ಕಾರ್ಯಕ್ರಮದ ಸಂಘಟಕರ ನಡುವೆ ವೇದಿಕೆಯ ಮೇಲೆಯೇ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದು ಬಂದಿದೆ. ಕಾವ್ಯಾ ಶೈವ ಅವರು ಕಿರುತೆರೆ ಮೂಲಕ ಜನಪ್ರಿಯತೆ ಪಡೆದವರು. ‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ನಟಿಸಿದ್ದ ಅವರು, ‘ಕೊತ್ತಲವಾಡಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.


















