ಕೋಲ್ಕತ್ತಾ : ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ರೌಡಿ ಆಕಾಶ್ ಸಿಂಗ್ ಅಹಂಕಾರವನ್ನು ಪೊಲೀಸರು ಅಡಗಿಸಿದ್ದಾರೆ. ಕೇವಲ ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ರಸ್ತೆಯುದ್ದಕ್ಕೂ ಪರೇಡ್ ಮಾಡುವ ಮೂಲಕ ಹೌರಾ ಪೊಲೀಸರು ಕಾನೂನಿಗೆ ಇರುವ ಶಕ್ತಿಯನ್ನು ತೋರಿಸಿದ್ದಾರೆ.
ಹೌರಾ ಭಾಗದಲ್ಲಿ ತಾನೊಬ್ಬ ದೊಡ್ಡ ‘ಡಾನ್’ ಎಂದು ಬಿಂಬಿಸಿಕೊಂಡು ವಸೂಲಿ ದಂಧೆ, ಹಫ್ತಾ ವಸೂಲಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆಕಾಶ್ ಸಿಂಗ್‌ನನ್ನು ಇತ್ತೀಚೆಗಷ್ಟೇ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಈ ತನಿಖೆಯ ಭಾಗವಾಗಿ ಪೊಲೀಸರು ಆತನನ್ನು ಮಾಲಿಪಾಂಚ್‌ಘರಾ ಮತ್ತು ಗೋಲಾಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯ ಅಪರಾಧ ನಡೆದ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದರು.
ಈ ವೇಳೆ ಆತನ ತಲೆ ಹಾಗೂ ಗಡ್ಡವನ್ನು ಸಂಪೂರ್ಣವಾಗಿ ಬೋಳಿಸಿ, ಕೇವಲ ಬನಿಯನ್ ಮತ್ತು ಅಂಡರ್‌ವೇರ್ ಧರಿಸಿ ಸಾರ್ವಜನಿಕವಾಗಿ ರಸ್ತೆಯಲ್ಲಿ ನಡೆಸಿಕೊಂಡು ಹೋಗಲಾಯಿತು. ಸಮಾಜದಲ್ಲಿ ಅಪರಾಧ ಎಸಗುವ ಮುನ್ನ ನಡುಕ ಹುಟ್ಟಬೇಕು ಮತ್ತು ಕ್ರಿಮಿನಲ್‌ಗಳಿಗೆ ಕಠಿಣ ಸಂದೇಶ ರವಾನಿಸಬೇಕು ಎಂಬ ಉದ್ದೇಶದಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಆಕಾಶ್ ಸಿಂಗ್ ಮೇಲಿರುವ ಕ್ರಿಮಿನಲ್ ರೆಕಾರ್ಡ್ಸ್ ಸಣ್ಣದೇನಲ್ಲ. 2021 ರಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆಯೇ ಈತ ನೇರವಾಗಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದ ಗಂಭೀರ ಆರೋಪವಿದೆ. ಹೌರಾದ ಲಿಲುವಾ ಪ್ರದೇಶದಲ್ಲಿ ಜನವಸತಿ ಪ್ರದೇಶಗಳಲ್ಲೇ 20 ಕ್ಕೂ ಹೆಚ್ಚು ಜೀವಂತ ಬಾಂಬ್‌ಗಳನ್ನು ಎಸೆದು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಮತ್ತು ಭಯದ ವಾತಾವರಣ ಸೃಷ್ಟಿಸಿದ ಪ್ರಕರಣಗಳು ದಾಖಲಾಗಿವೆ.
ಆಕಾಶ್ ಸಿಂಗ್ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ನಾಯಕನಲ್ಲದಿದ್ದರೂ, ಆಡಳಿತಾರೂಢ ಟಿಎಂಸಿ ಪಕ್ಷದ ಪ್ರಭಾವಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೌರಾ ಭಾಗದಲ್ಲಿ ಟಿಎಂಸಿಯ ಮಾಜಿ ಶಾಸಕರೊಬ್ಬರ ಬಲಗೈ ಬಂಟನಾಗಿದ್ದ ಈತ ಆಡಳಿತ ಪಕ್ಷದ ರಾಜಕೀಯ ಪ್ರಭಾವದ ಬೆಂಬಲದೊಂದಿಗೇ ಇಷ್ಟು ದಿನ ವಸೂಲಿ ದಂಧೆ ಹಾಗೂ ಬಾಂಬ್ ದಾಳಿಗಳನ್ನು ಮಾಡುತ್ತಾ ಮೆರೆಯುತ್ತಿದ್ದ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

















