ಆಗ್ರಾ : ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತನ್ನ ಪತ್ನಿ ಜೀನೆಟ್ನೊಂದಿಗೆ ಇಂದು ಆಗ್ರಾದಲ್ಲಿರುವ ಪ್ರೇಮಸೌಧ ತಾಜ್ ಮಹಲ್ಗೆ ಭೇಟಿ ನೀಡಿದ್ದಾರೆ. ಇಂದು (ಸೋಮವಾರ) ವಿಶೇಷ ವಿಮಾನದಲ್ಲಿ ಆಗ್ರಾದ ಖೇರಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾರ್ಕೊ ರೂಬಿಯೊ ಹಾಗೂ ಅವರ ಪತ್ನಿ ವಿಶ್ವವಿಖ್ಯಾತ ತಾಣ ತಾಜ್ ಮಹಲ್ಗೆ ಭೇಟಿ ನೀಡಿದರು. ಇವರ ಭೇಟಿ ವೇಳೆ ಸ್ಮಾರಕ ಸಂಕೀರ್ಣದೊಳಗಿದ್ದ, ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಹೊರಹೋಗುವಂತೆ ಭದ್ರತಾ ಸಿಬ್ಬಂದಿ ಮನವಿ ಮಾಡಿದ್ದಾರೆ.
ಯುನೆಸ್ಕೋ ವಿಶ್ವಪರಂಪರೆಯ ತಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್ನಲ್ಲಿ ಒಂದು ಗಂಟೆ ಸಮಯ ಕಳೆದ ಮಾರ್ಕೊ ರುಬಿಯೊ, ತಾಜ್ ಮಹಲ್ ‘ವಿಶ್ವದ ಪ್ರೇಮ ನಿಧಿಗಳಲ್ಲಿ ಒಂದು’ ಎಂದು ಬಣ್ಣಿಸಿದ್ದಾರೆ. ನಾಳೆ (ಮಂಗಳವಾರ) ನವದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಮಾರ್ಕೊ ರೂಬಿಯೊ ಜೈಪುರಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


















