ಮನೆ ಸುದ್ದಿ ಜಾಲ ಹಜಾರ ರಾಮ ದೇಗುಲದ ಆವರಣದಲ್ಲಿ ಪ್ರಾಚೀನ ಕಾಲದ ಒಳಚರಂಡಿ ಪತ್ತೆ : ಹಂಪಿ ಉತ್ಖನನ

ಹಜಾರ ರಾಮ ದೇಗುಲದ ಆವರಣದಲ್ಲಿ ಪ್ರಾಚೀನ ಕಾಲದ ಒಳಚರಂಡಿ ಪತ್ತೆ : ಹಂಪಿ ಉತ್ಖನನ

0

ವಿಜಯನಗರ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿನ ಪ್ರಸಿದ್ಧ ಹಜಾರ ರಾಮ ದೇವಾಲಯದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸುತ್ತಿರುವ ವೈಜ್ಞಾನಿಕ ಉತ್ಖನನದ ಸಂದರ್ಭದಲ್ಲಿ ಪ್ರಾಚೀನ ಕಾಲದ ಒಳಚರಂಡಿ ವ್ಯವಸ್ಥೆ ಕಂಡುಬಂದಿದೆ. ಶುಕ್ರವಾರ ನಡೆದ ಉತ್ಖನನ ಕಾರ್ಯದಲ್ಲಿ ಬೆಳಕಿಗೆ ಬಂದ ಈ ರಚನೆ ವಿಜಯನಗರ ಕಾಲದ ಸುಧಾರಿತ ನೀರಿನ ನಿರ್ವಹಣಾ ವ್ಯವಸ್ಥೆಗೆ ಸಾಕ್ಷಿ ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಹಾಗೂ ಉತ್ಖನನದ ವೇಳೆ ಮತ್ತೆ ಎರಡು ಆಳ್ವಾರ್ ಶಿಲ್ಪಗಳೂ ಪತ್ತೆಯಾಗಿದ್ದು, ಇತ್ತೀಚಿನ ವಾರಗಳಲ್ಲಿ ಹಂಪಿ ಪ್ರದೇಶದಲ್ಲಿ ನಡೆದ ಮಹತ್ವದ ಪುರಾತತ್ವ ಆವಿಷ್ಕಾರಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದಕ್ಕೂ ಮೊದಲು, ದೇವಾಲಯದ ಆವರಣದಲ್ಲಿ ನಡೆದ ವೈಜ್ಞಾನಿಕ ತೆರವು ಕಾರ್ಯದ ವೇಳೆ ಎರಡು ಆಳ್ವಾರ್ ಪ್ರತಿಮೆಗಳು ಹಾಗೂ ಜೈನ ದೇವಾಲಯದ ಛಾವಣಿ ರಚನೆಯ ಅವಶೇಷಗಳು ಸಿಕ್ಕಿದ್ದವು. ಹಂಪಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಕೆ.ರಾಮಕೃಷ್ಣನ್ ರೆಡ್ಡಿ ಮಾತನಾಡಿ, “ಹೊಸದಾಗಿ ಪತ್ತೆಯಾಗಿರುವ ಒಳಚರಂಡಿ ವ್ಯವಸ್ಥೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರೂಪುಗೊಂಡ ಸುಧಾರಿತ ಧಾರ್ಮಿಕ ಹಾಗೂ ನೀರಿನ ನಿರ್ವಹಣಾ ತಂತ್ರಜ್ಞಾನದ ಭಾಗವಾಗಿರಬಹುದು” ಎಂದು ತಿಳಿಸಿದ್ದಾರೆ. ಗ್ರಾನೈಟ್ ಕಲ್ಲಿನ ಚಪ್ಪಡಿಗಳಿಂದ ಸೂಕ್ಷ್ಮವಾಗಿ ನಿರ್ಮಿಸಲಾದ ಒಳಚರಂಡಿ ಜಾಲವು ವಿಜಯನಗರ ವಾಸ್ತುಶಿಲ್ಪಿಗಳ ಎಂಜಿನಿಯರಿಂಗ್ ನೈಪುಣ್ಯವನ್ನು ಪ್ರತಿಬಿಂಬಿಸುತ್ತದೆ. ಈ ಆವಿಷ್ಕಾರವು ಮಧ್ಯಕಾಲೀನ ದಕ್ಷಿಣ ಭಾರತದ ದೇವಾಲಯಗಳ ಆಚರಣೆಗಳು, ನೀರಿನ ಪರಿಚಲನೆ ವ್ಯವಸ್ಥೆ ಹಾಗೂ ವಾಸ್ತುಶಿಲ್ಪ ವಿನ್ಯಾಸಗಳ ಕುರಿತು ಹೊಸ ಒಳನೋಟಗಳನ್ನು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರಿಂದ ಐತಿಹಾಸಿಕ ಹಂಪಿಯಲ್ಲಿ ನಿತ್ಯ ಉತ್ಖನನ ನಡೆಯುತ್ತಿದೆ. ಇಲ್ಲಿ ಬಗೆದಷ್ಟು ವಿಸ್ಮಯಗಳು ಪತ್ತೆಯಾಗುತ್ತಲೇ ಇವೆ. ಕಳೆದ 3 ದಿನದ ಹಿಂದೆ ಕಲ್ಲಿನ ಛಾವಣಿ, ಆನೆಯ ವಿಗ್ರಹಗಳು ಪತ್ತೆಯಾಗಿದ್ದವು. ಇದೀಗ ಪ್ರಾಚೀನ ಒಳಚರಂಡಿ ವ್ಯವಸ್ಥೆ ಪತ್ತೆಯಾಗಿದೆ. ಉತ್ಖನನ ಕಾರ್ಯ ಸತತವಾಗಿ ನಡೆಯುತ್ತಿರುವುದರಿಂದ ಮತ್ತಷ್ಟು ಪುರಾತನ ವಿಗ್ರಹಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬುದ್ದಾಗಿದೆ.