ತಮಿಳುನಾಡು : ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ನಾಯಕರು ಚಿತ್ರರಂಗದ ಸಮಸ್ಯೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ತೆಗೆದುಕೊಂಡಿರುವ ಹೊಸ ನಿರ್ಧಾರ ಇದೇ ಮಾತಿಗೆ ಉದಾಹರಣೆಯಾಗಿದೆ. ಚಿತ್ರರಂಗ ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸಿಎಂ ವಿಜಯ್ ಅವರು ಚಿತ್ರಮಂದಿರಗಳ ಮಾಲೀಕರು ಹಾಗೂ ಸಿನಿಪ್ರೇಕ್ಷಕರಿಗೆ ಮಹತ್ವದ ಸೌಲಭ್ಯ ಘೋಷಿಸಿದ್ದಾರೆ. ರಾಜ್ಯದಲ್ಲಿ ಬಿಡುಗಡೆಯಾಗುವ ಹೊಸ ತಮಿಳು ಸಿನಿಮಾಗಳಿಗೆ ಮೊದಲ 7 ದಿನಗಳವರೆಗೆ ಪ್ರತಿದಿನ 5 ಶೋಗಳನ್ನು ನಡೆಸಲು ಸರ್ಕಾರ ಅಧಿಕೃತ ಅನುಮತಿ ನೀಡಿದೆ.
ಮೇ 16 ರಂದು ತಮಿಳು ಚಿತ್ರರಂಗದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಚಿತ್ರಮಂದಿರ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿದ್ದರು. ಚಿತ್ರಮಂದಿರಗಳ ಆದಾಯ ಹೆಚ್ಚಿಸಲು ಹಾಗೂ ಸಿನಿಮಾ ಇಂಡಸ್ಟ್ರಿಯನ್ನು ನಷ್ಟದಿಂದ ರಕ್ಷಿಸಲು ದಿನಕ್ಕೆ 5 ಪ್ರದರ್ಶನಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಸಿನಿಮಾ ಹಿನ್ನೆಲೆಯಿಂದ ಬಂದಿರುವ ವಿಜಯ್ ಅವರು ನಿರ್ಮಾಪಕರು ಮತ್ತು ಥಿಯೇಟರ್ ಮಾಲೀಕರ ಸಮಸ್ಯೆಗಳನ್ನು ಚೆನ್ನಾಗಿ ತಿಳಿದಿರುವ ಕಾರಣ, ಈ ಬೇಡಿಕೆಗೆ ತಕ್ಷಣವೇ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ವಿಜಯ್ ಈ ಮನವಿಯನ್ನು ನ್ಯಾಯಸಮ್ಮತ ಎಂದು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹಳೆಯ ನಿಯಮದ ಪ್ರಕಾರ ಏನಿತ್ತು?
1957 ರ ತಮಿಳುನಾಡು ಸಿನಿಮಾಸ್ ರೆಗ್ಯುಲೇಶನ್ ನಿಯಮಾವಳಿಗಳ ಅನ್ವಯ ರಾಜ್ಯದ ಚಿತ್ರಮಂದಿರಗಳಲ್ಲಿ ದಿನಕ್ಕೆ ಕೇವಲ 4 ಪ್ರದರ್ಶನಗಳಿಗೆ ಮಾತ್ರ ಅವಕಾಶ ಇತ್ತು. ಹಬ್ಬಗಳು ಅಥವಾ ಸರ್ಕಾರಿ ರಜೆ ದಿನಗಳಲ್ಲಿ ಮಾತ್ರ 5 ನೇ ವಿಶೇಷ ಶೋ ನಡೆಸಬಹುದಾಗಿತ್ತು. ಅದಕ್ಕೂ ಜಿಲ್ಲಾಧಿಕಾರಿಗಳು ಅಥವಾ ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಅವರ ವಿಶೇಷ ಅನುಮತಿ ಅಗತ್ಯವಾಗುತ್ತಿತ್ತು. ಸರ್ಕಾರವೂ ಪ್ರತ್ಯೇಕ ಆದೇಶ ಹೊರಡಿಸಬೇಕಾಗಿದ್ದ ಕಾರಣ ಸಾಕಷ್ಟು ವಿಳಂಬ ಉಂಟಾಗುತ್ತಿತ್ತು. ಇದರಿಂದ ಸಿನಿಮಾಗಳ ಮುಂಗಡ ಬುಕ್ಕಿಂಗ್ ಮೇಲೂ ಪರಿಣಾಮ ಬೀಳುತ್ತಿತ್ತು.
ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ವಾರದವರೆಗೆ ಯಾವುದೇ ಹೆಚ್ಚುವರಿ ಅನುಮತಿ ಪಡೆಯದೆ 5 ಪ್ರದರ್ಶನಗಳನ್ನು ನಡೆಸಬಹುದು. ಡಬ್ ಆದ ಸಿನಿಮಾಗಳು ಹಾಗೂ ಮರು ಬಿಡುಗಡೆಯಾಗುವ ಚಿತ್ರಗಳಿಗೂ ಈ ಸೌಲಭ್ಯ ಅನ್ವಯವಾಗಲಿದೆ.


















