ಮನೆ ಸುದ್ದಿ ಜಾಲ ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ಸಿಡಿದ ಪ್ರತಿಕ್ರಿಯೆ!

ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ಸಿಡಿದ ಪ್ರತಿಕ್ರಿಯೆ!

0

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಪ್ಲೇಆಫ್ ಪ್ರವೇಶ ತಪ್ಪಿಸಿಕೊಂಡಿದೆ. ಪ್ಲೇಆಫ್ಗೆ ಅರ್ಹತೆ ಪಡೆದ ರಾಜಸ್ಥಾನ್ ರಾಯಲ್ಸ್ 16 ಅಂಕಗಳನ್ನು ಸಂಪಾದಿಸಿದ್ದರೆ, ಪಂಜಾಬ್ ಕಿಂಗ್ಸ್ 15 ಅಂಕಗಳೊಂದಿಗೆ ತನ್ನ ಐಪಿಎಲ್ ಪಯಣ ಮುಗಿಸಿದೆ. ತಂಡ ಹೊರಬಿದ್ದ ಬಳಿಕ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ಆನ್ಲೈನ್ ಟ್ರೋಲ್ಗೆ ಗುರಿಯಾಗಿದ್ದಾರೆ. ಈ ಕುರಿತು ಸ್ವತಃ ಶ್ರೇಷ್ಠಾ ಅಯ್ಯರ್ ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ವಿವಾದ?
ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗಿತ್ತು.ಪಂದ್ಯ ರದ್ದಾದ ನಂತರ ಶ್ರೇಷ್ಠಾ ಅಯ್ಯರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, “ನಾವು ಪಂಜಾಬಿಗಳು ದೊಡ್ಡ ಹೃದಯದವರು, ನಿಮಗೆ ಒಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂದು ಹಾಸ್ಯಭರಿತ ರೀಲ್ಸ್ ಹಂಚಿಕೊಂಡಿದ್ದರು.

ಪ್ಲೇಆಫ್ನಿಂದ ಪಂಜಾಬ್ ಕಿಂಗ್ಸ್ ನಿರ್ಗಮನ:
ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡವು ಎರಡನೇ ಹಂತದಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿತು. ಪರಿಣಾಮ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ.ಈ ಸೋಲಿನ ಬಳಿಕ ಶ್ರೇಷ್ಠಾ ಅಯ್ಯರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಹಿಂದೆ ಕೆಕೆಆರ್ ತಂಡವನ್ನು ಉಲ್ಲೇಖಿಸಿ ಮಾಡಿದ್ದ “ಒಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂಬ ವಿಡಿಯೋವನ್ನೇ ಬಳಸಿ ಈಗ ಅವರನ್ನು ಕಿಚಾಯಿಸಲಾಗುತ್ತಿದೆ.ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಮೆಂಟ್ಗಳನ್ನು ಮಾಡಿದ್ದು, ಇನ್ನೂ ಕೆಲವರು “ಕರ್ಮ ಹಿಂತಿರುಗಿದೆ”, “ಮುಂಚಿತವಾಗಿ ಸಂಭ್ರಮಿಸಬಾರದು” ಎಂದು ಟೀಕಿಸಿದ್ದಾರೆ.

ಶ್ರೇಷ್ಠಾ ಅಯ್ಯರ್ ಆಕ್ರೋಶ:
ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಷ್ಠಾ ಅಯ್ಯರ್, “ಆ ವಿಡಿಯೋ ಕೇವಲ ತಮಾಷೆಗಾಗಿ ಮಾಡಲಾಗಿತ್ತು. ಆದರೆ ಕ್ರೀಡೆಯನ್ನು ಕ್ರೀಡೆಯಾಗಿ ನೋಡದೆ ನನ್ನ ಕುಟುಂಬ ಹಾಗೂ ವೃತ್ತಿಜೀವನವನ್ನು ಎಳೆದು ತರುವುದು ದುರದೃಷ್ಟಕರ” ಎಂದು ಹೇಳಿದ್ದಾರೆ.“ನನ್ನ ಸಹೋದರ ಶ್ರೇಯಸ್ ಅಯ್ಯರ್ ಗೆದ್ದರೂ, ಸೋತರೂ ನಾನು ಸದಾ ಅವನ ಬೆಂಬಲದಲ್ಲೇ ಇರುತ್ತೇನೆ. ಅವನ ಸಾಧನೆಗೆ ನಾನು ಹೆಮ್ಮೆಪಡುತ್ತೇನೆ. ಕೆಲಸವಿಲ್ಲದವರು ಮಾತ್ರ ಈ ರೀತಿಯ ಟ್ರೋಲ್ ಮಾಡುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.

ಇದರ ಜೊತೆಗೆ ಟ್ರೋಲಿಂಗ್ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ ಎಂದು ತಿಳಿಸಿರುವ ಶ್ರೇಷ್ಠಾ ಅಯ್ಯರ್, ಕೆಲವರು ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯರಾತ್ರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.“ನನ್ನ ಆಪ್ತರು ಮತ್ತು ಕಚೇರಿಗೆ ಕರೆ ಮಾಡಿ ತೊಂದರೆ ನೀಡುತ್ತಿರುವುದು ನಿಮ್ಮ ಸಂಸ್ಕಾರವನ್ನು ತೋರಿಸುತ್ತದೆ. ಕೆಟ್ಟ ಕರ್ಮ ಒಂದು ದಿನ ನಿಮಗೂ ಹಿಂತಿರುಗುತ್ತದೆ” ಎಂದು ಶ್ರೇಷ್ಠಾ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ಶ್ರೇಷ್ಠಾ ಅಯ್ಯರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಆನ್ಲೈನ್ ಬುಲ್ಲಿಂಗ್ ವಿರುದ್ಧವೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.