ಮೊರಾದಾಬಾದ್ : ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರ ಮತ್ತು ತಂಗಿಯ ಸಹಾಯದಿಂದ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ದುರ್ದೈವಿಯನ್ನು ಪವನ್ ಎಂದು ಗುರುತಿಸಲಾಗಿದೆ. ಪವನ್ ಮತ್ತು ಆಂಚಲ್ (24) ದಂಪತಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ. ಆದರೆ, ಆಂಚಲ್‌ಗೆ ಆಕೆಯ ಸ್ವಂತ ಸೋದರಳಿಯ ಅಂಕಿತ್ (21) ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಈ ವಿಷಯ ಪವನ್‌ಗೆ ತಿಳಿದಿದ್ದರಿಂದ ಇಬ್ಬರ ನಡುವೆ ಪ್ರತಿದಿನ ತೀವ್ರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ಇದೇ ಕಾರಣಕ್ಕೆ ಆಂಚಲ್ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಪ್ಲಾನ್ ಮಾಡಿದ್ದಳು.
ಈ ಪಕ್ಕಾ ಸ್ಕೆಚ್‌ಗೆ ಸಹಾಯ ಮಾಡಲು ಆಂಚಲ್ ತಂಗಿ ಶಿಖಾ (18) ನಾಲ್ಕು ದಿನಗಳ ಮೊದಲೇ ಇವರ ಮನೆಗೆ ಬಂದಿದ್ದಳು. ಅಷ್ಟೇ ಅಲ್ಲದೆ ಶಿಖಾ ತನ್ನ ಗೆಳೆಯ ಅಜಯ್ (19) ಎಂಬಾತನನ್ನು ಕೂಡ ಈ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿದ್ದಳು. ಕೊಲೆಯ ದಿನದಂದು ಈ ನಾಲ್ವರ ಗ್ಯಾಂಗ್ ಪವನ್‌ಗೆ ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದೆ. ಪವನ್ ತೀವ್ರವಾಗಿ ಪ್ರತಿರೋಧ ಒಡ್ಡಿದಾಗ, ಆತನನ್ನು ಹಗ್ಗದಿಂದ ಕಟ್ಟಿಹಾಕಿ ಬರ್ಬರವಾಗಿ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಸುಮಾರು ಮೂರು ಗಂಟೆಗಳ ಕಾಲ ಪವನ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು, ಆತನಿಗೆ ಸತತವಾಗಿ ವಿದ್ಯುತ್ ಆಘಾತಗಳನ್ನು ನೀಡಿದ್ದಾರೆ. ಪವನ್ ತೀವ್ರವಾಗಿ ಜರ್ಜರಿತನಾದಾಗ, ಕೊನೆಗೆ ಆತನಿಗೆ ಬಲವಂತವಾಗಿ ವಿಷ ಪ್ರಾಶನ ಮಾಡಿಸಿದ್ದಾರೆ.
ಪವನ್ ಮೃತಪಟ್ಟ ನಂತರ ಕೊಲೆಯನ್ನು ಮುಚ್ಚಿಹಾಕಲು, ಶವವನ್ನು ಮೆಟ್ಟಿಲುಗಳ ಮೇಲಿಂದ ತಳ್ಳಿ ಹಾಕಿದ್ದಾರೆ. ನಂತರ ನೆರೆಹೊರೆಯವರಿಗೆ ಪವನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಕಥೆ ಕಟ್ಟಿದ್ದಾರೆ. ಪವನ್ ಕುಟುಂಬಸ್ಥರ ಪ್ರಕಾರ, ಆತನಿಗೆ ಮೊದಲೇ ಜೀವ ಬೆದರಿಕೆ ಇತ್ತು. ಮೂರು ತಿಂಗಳ ಹಿಂದೆಯೇ ಪವನ್ ತನ್ನ ಸಹೋದರಿಗೆ ಕರೆ ಮಾಡಿ ತನಗೆ ಏನಾದರೂ ಅಪಾಯ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದನು. ಸದ್ಯ ಪೊಲೀಸರು ಆಂಚಲ್, ಅಂಕಿತ್, ಶಿಖಾ ಮತ್ತು ಅಜಯ್ ನಾಲ್ವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.


















