ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ಲೋಪ, ನಿರ್ಲಕ್ಷ್ಯತೆ ಹಾಗೂ ಸರ್ಕಾರಿ ಆಸ್ತಿಗಳ ಅಕ್ರಮ ಖಾತೆ ಸೃಜನೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಎನ್ ವಿರುದ್ಧ ಸಾರ್ವಜನಿಕರಿಂದ ಅನೇಕ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದ್ದು, ಇದೀಗ ಕಂದಾಯ ನಿರೀಕ್ಷಕನನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಮೈಸೂರು ಜಿಲ್ಲಾಧಿಕಾರಿ ಕಚೇರಿ 03 ಜನವರಿ 2026ರಂದು ಅಧಿಕೃತ ಆದೇಶ ಹೊರಡಿಸಿ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಕಂದಾಯ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು. 15 ದಿನಗಳೊಳಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.
ತನಿಖಾ ತಂಡದ ಮುಖ್ಯಸ್ಥರಾದ ಸೋಮಶೇಖರ್ ಅವರು 16 ಮೇ 2026ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಸರ್ವೆ ನಂಬರ್‌ಗಳ ಖಾತಾ ದಾಖಲಾತಿಗಳ ಬಗ್ಗೆ ಗಂಭೀರ ದೂರುಗಳು ಬಂದಿರುವುದರಿಂದ ಸಮಗ್ರ ತನಿಖೆಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಕರವಸೂಲಿಗಾರ, ಕಂದಾಯ ನಿರೀಕ್ಷಕ ಹಾಗೂ ಮುಖ್ಯಾಧಿಕಾರಿಯನ್ನು ಬೇರೆ ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸುವಂತೆ ಸಹ ಶಿಫಾರಸು ಮಾಡಿದ್ದಾರೆ.ತನಿಖೆಯಲ್ಲಿ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಇ-ಆಸ್ತಿ ಪೋರ್ಟಲ್‌ನಲ್ಲಿ ಮುಖ್ಯಾಧಿಕಾರಿಯ ಲಾಗಿನ್‌ನಲ್ಲಿ 858 ಅರ್ಜಿಗಳು ಹಾಗೂ ಕಂದಾಯ ನಿರೀಕ್ಷಕರ ಲಾಗಿನ್‌ನಲ್ಲಿ 207 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದೇ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದಲ್ಲದೆ, ಸಾರ್ವಜನಿಕರಿಂದ ಬಂದ ದೂರುಗಳಲ್ಲಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು ತಪ್ಪು ದಾಖಲಾತಿಗಳನ್ನು ನೀಡಿರುವ ಆರೋಪಗಳೂ ಉಲ್ಲೇಖಗೊಂಡಿವೆ. ಸರ್ಕಾರದ ಸರ್ವೆ ನಂ.259/5 ಆಸ್ತಿಯ ಮೂಲ ದಾಖಲೆಗಳನ್ನು ಪರಿಶೀಲಿಸದೇ ಖಾಸಗಿ ವ್ಯಕ್ತಿಗಳಿಗೆ ಇ-ಆಸ್ತಿ ಸೃಜಿಸಿರುವುದಾಗಿ ಹಾಗೂ ನಂತರ ಅಧಿಕಾರ ಮೀರಿಸಿ ಖಾತೆಗಳನ್ನು ರದ್ದುಪಡಿಸಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರಡಿ ಇಬ್ಬರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದರು. ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಕೆಎಂಎಎಸ್ ಶ್ರೇಣಿ-1 ಅಧಿಕಾರಿಯಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಇನ್ನು ಕಂದಾಯ ನಿರೀಕ್ಷಕ ಮಂಜುನಾಥ್ ಎನ್ ವಿರುದ್ಧ ಪೌರಾಡಳಿತ ನಿರ್ದೇಶನಾಲಯ ಕ್ರಮ ಕೈಗೊಂಡಿದ್ದು, ನಿರ್ದೇಶಕ ರವೀಂದ್ರ ಪಿ.ಎನ್ ಅವರು 25 ಮೇ 2026ರಂದು ಹೊರಡಿಸಿದ ಆದೇಶದಂತೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಸೇವೆಯಿಂದ ದೂರ ಇರಲಿದ್ದು, ಅವರ ಲೀನ್ ಅನ್ನು ಹಾಸನ ಮಹಾನಗರ ಪಾಲಿಕೆ ಯ ಖಾಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆಯಬಾರದು ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅವರು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


















