ಬೆಂಗಳೂರು (ಮೇ 30): ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ನೂತನ ನಾಯಕನಾಗಿ ಅಧಿಕೃತವಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಇದೇ ವೇಳೆ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿದ್ದು, ಕಾರ್ಯಕ್ರಮದ ದಿನಾಂಕವೂ ಅಂತಿಮಗೊಂಡಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ಬುಧವಾರ ಗೋಧೂಳಿ ಲಗ್ನದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ಮೊದಲ ಹಂತದಲ್ಲಿ ಸುಮಾರು 10 ಸಚಿವರು ಸಹ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಭವ್ಯ ಸಮಾರಂಭ
ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರ ಬಹುಕಾಲದ ರಾಜಕೀಯ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆ ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ವಿಶೇಷ ವೇದಿಕೆ ನಿರ್ಮಿಸಿ, ಭವ್ಯ ಪ್ರಮಾಣ ವಚನ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಹಿಂದೆ ಜೂನ್ 4 ಅಥವಾ ಜೂನ್ 5ರಂದು ಪದಗ್ರಹಣ ಕಾರ್ಯಕ್ರಮ ನಡೆಯಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಜ್ಯೋತಿಷಿ ಆರಾಧ್ಯ ಅವರ ಸಲಹೆಯಂತೆ ಬುಧವಾರ ಸಂಜೆ ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ಪದಗ್ರಹಣಕ್ಕೆ ಕಾಂಗ್ರೆಸ್ ನಾಯಕರ ದಂಡು
ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಈಗಾಗಲೇ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

















