ಮನೆ ಸುದ್ದಿ ಜಾಲ COMED-K UGET ಫಲಿತಾಂಶ ಪ್ರಕಟ: ಅಗ್ರ 10 ರ‍್ಯಾಂಕ್ ಪಟ್ಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಾನ ಇಲ್ಲ

COMED-K UGET ಫಲಿತಾಂಶ ಪ್ರಕಟ: ಅಗ್ರ 10 ರ‍್ಯಾಂಕ್ ಪಟ್ಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಾನ ಇಲ್ಲ

0

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ಕಾಲೇಜುಗಳ ಒಕ್ಕೂಟ (COMED-K) ನಡೆಸುವ UGET ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಾಧನೆ ಕುಸಿತ ಕಂಡಿರುವುದು ಈ ಬಾರಿಯ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. 2026ನೇ ಸಾಲಿನ ಫಲಿತಾಂಶದಲ್ಲಿ ಅಗ್ರ 10 ರ‍್ಯಾಂಕ್ಗಳಲ್ಲಿ ಕರ್ನಾಟಕದ ಒಬ್ಬ ವಿದ್ಯಾರ್ಥಿಗೂ ಸ್ಥಾನ ದೊರಕಿಲ್ಲ.

ಶುಕ್ರವಾರ ಪ್ರಕಟವಾದ COMED-K UGET 2026 ಫಲಿತಾಂಶದಲ್ಲಿ ಮೊದಲ 10 ಸ್ಥಾನಗಳನ್ನು ಸಂಪೂರ್ಣವಾಗಿ ಇತರೆ ರಾಜ್ಯಗಳ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಶೇಷವಾಗಿ ಅಗ್ರ 10 ಪಟ್ಟಿಯಲ್ಲಿ ಐವರು ಜಾರ್ಖಂಡ್ ರಾಜ್ಯದ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಉಳಿದಂತೆ ಆಂಧ್ರಪ್ರದೇಶ, ಪಂಜಾಬ್, ಛತ್ತೀಸ್ಗಢ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳ ತಲಾ ಒಬ್ಬ ವಿದ್ಯಾರ್ಥಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

2025ರ ಫಲಿತಾಂಶದಲ್ಲಿ ಅಗ್ರ 10 ರ‍್ಯಾಂಕ್ ಪಟ್ಟಿಯಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದರು. ಆದರೆ ಈ ವರ್ಷ ಟಾಪ್ 100 ರ‍್ಯಾಂಕ್ಗಳಲ್ಲಿ ಮಾತ್ರ ಕರ್ನಾಟಕದ 30 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು

ಮೇ 9ರಂದು ದೇಶದ 171 ನಗರಗಳ 303 ಪರೀಕ್ಷಾ ಕೇಂದ್ರಗಳಲ್ಲಿ COMED-K UGET ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಒಟ್ಟು 1,10,774 ಅಭ್ಯರ್ಥಿಗಳು ಹಾಜರಾಗಿದ್ದರು.

ಇವರಲ್ಲಿ 36,954 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದರೆ, 73,820 ಅಭ್ಯರ್ಥಿಗಳು ಇತರೆ ರಾಜ್ಯಗಳಿಂದ ಪರೀಕ್ಷೆ ಬರೆದಿದ್ದಾರೆ.

ಪರ್ಸೆಂಟೈಲ್ ಆಧಾರಿತ ಅಂಕಿಅಂಶಗಳು

ಅಧಿಕಾರಿಗಳ ಮಾಹಿತಿ ಪ್ರಕಾರ, 90 ರಿಂದ 100 ಪರ್ಸೆಂಟೈಲ್ ನಡುವಿನ ಶ್ರೇಣಿಯಲ್ಲಿ 11,207 ಅಭ್ಯರ್ಥಿಗಳು ಇದ್ದು, ಅವರಲ್ಲಿ 3,496 ಮಂದಿ ಕರ್ನಾಟಕದವರು.

80 ರಿಂದ 90 ಪರ್ಸೆಂಟೈಲ್ ನಡುವಿನ ಶ್ರೇಣಿಯಲ್ಲಿ 11,385 ಅಭ್ಯರ್ಥಿಗಳು ಇದ್ದು, ಅವರಲ್ಲಿ 3,207 ಮಂದಿ ಕರ್ನಾಟಕದ ವಿದ್ಯಾರ್ಥಿಗಳಾಗಿದ್ದಾರೆ.

70 ರಿಂದ 80 ಪರ್ಸೆಂಟೈಲ್ ನಡುವಿನ ಶ್ರೇಣಿಯಲ್ಲಿ 10,940 ಅಭ್ಯರ್ಥಿಗಳು ಇದ್ದು, ಅವರಲ್ಲಿ 3,111 ಮಂದಿ ಕರ್ನಾಟಕದ ಅಭ್ಯರ್ಥಿಗಳಾಗಿದ್ದಾರೆ.

ಫಲಿತಾಂಶ ವೀಕ್ಷಣೆ ಹೇಗೆ?

ಅಭ್ಯರ್ಥಿಗಳು ತಮ್ಮ Applicant Login ಮೂಲಕ ಫಲಿತಾಂಶ ಹಾಗೂ ರ‍್ಯಾಂಕ್ವೀಕ್ಷಿಸಬಹುದು. ಅರ್ಹ ಅಭ್ಯರ್ಥಿಗಳ Rank Card ಗಳನ್ನು COMED-K ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಈ ವರ್ಷವೂ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ತಮ್ಮ ಲಾಗಿನ್ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ. ದಾಖಲೆಗಳನ್ನು ತಜ್ಞರ ತಂಡ ಪರಿಶೀಲನೆ ನಡೆಸಲಿದೆ.

ಸೀಟುಗಳ ಲಭ್ಯತೆ, ಬೋಧನಾ ಶುಲ್ಕದ ವಿವರಗಳು ಹಾಗೂ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆಯ ಸಂಪೂರ್ಣ ಮಾರ್ಗಸೂಚಿಯನ್ನು ಒಳಗೊಂಡ ಪ್ರತ್ಯೇಕ ದಾಖಲೆಯನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

COMED-K UGET 2026 ಟಾಪ್ 10 ರ‍್ಯಾಂಕ್   ಪಡೆದ ವಿದ್ಯಾರ್ಥಿಗಳು

  1. ದರ್ಶಿಲ್ ಮೋದಿ – ರಾಂಚಿ, ಜಾರ್ಖಂಡ್
  2. ಪ್ರಿಯಾನುಜ್ ಭಾಗಬತಿ – ಜಂಶೆಡ್ಪುರ, ಜಾರ್ಖಂಡ್
  3. ಶ್ರೇಷ್ಠಾ ಗುಪ್ತಾ – ಡೆಹ್ರಾಡೂನ್, ಉತ್ತರಾಖಂಡ
  4. ಅರ್ಷ್ ಪರಾಶರ್ – ಜಾರ್ಖಂಡ್
  5. ಇಶಾಂಕಾ ಅಗರ್ವಾಲ್ – ಜಂಶೆಡ್ಪುರ, ಜಾರ್ಖಂಡ್
  6. ಅನೀಶ್ ಶುಕ್ಲಾ – ಜಂಶೆಡ್ಪುರ, ಜಾರ್ಖಂಡ್
  7. ನರೇಂದ್ರಬಾಬು ಗಾರಿ ಮಹಿತ್ – ಚಿತ್ತೂರು, ಆಂಧ್ರಪ್ರದೇಶ
  8. ದೃಷ್ಟಿ ಸಚ್ದೇವ್ – ಬಿಲಾಸ್ಪುರ, ಛತ್ತೀಸ್ಗಢ
  9. ಮನಸ್ ಜಿಂದಾಲ್ – ಪಂಜಾಬ್
  10. ಆದಿತ್ಯ ಕುಮಾರ್ – ಬಿಹಾರ