ಮಂಡ್ಯ: ಐಷಾರಾಮಿ ಜೀವನ ನಡೆಸುವ ಆಸೆ ಕೆಲವರನ್ನು ತಪ್ಪು ದಾರಿಗೆ ಎಳೆಯುತ್ತದೆ. ಸ್ವಂತ ದುಡಿಮೆಯಿಂದ ಉತ್ತಮ ಜೀವನ ನಡೆಸುವುದರಲ್ಲಿ ತಪ್ಪೇನಿಲ್ಲ. ಆದರೆ ಇತರರ ಹಣ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟು ಬದುಕಲು ಯತ್ನಿಸಿದರೆ ಕೊನೆಗೆ ಕಾನೂನಿನ ಬಲೆಗೆ ಸಿಲುಕಲೇಬೇಕಾಗುತ್ತದೆ. ಮಂಡ್ಯದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ತನ್ನ ಹೆಂಡತಿ ಮುಂದೆ ತಾನು ಶ್ರೀಮಂತ ವ್ಯಕ್ತಿ ಎಂಬಂತೆ ತೋರಿಸಿಕೊಳ್ಳಲು ಕಳ್ಳತನದ ದಾರಿ ಹಿಡಿದಿದ್ದ ಎನ್ನಲಾಗಿದೆ. ದುಬಾರಿ ಜೀವನ ಶೈಲಿ ಹಾಗೂ ಆರ್ಥಿಕ ಸಾಮರ್ಥ್ಯ ಹೊಂದಿರುವಂತೆ ಬಿಂಬಿಸಿಕೊಳ್ಳಲು ಇತರರ ಮನೆಗಳಿಗೆ ಕನ್ನ ಹಾಕುತ್ತಿದ್ದ. ಆದರೆ ಈ ನಾಟಕ ಹೆಚ್ಚು ದಿನ ಮುಂದುವರಿಯದೆ ಇದೀಗ ಜೈಲು ಸೇರಿದ್ದಾನೆ.
ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ
ಮಾರ್ಚ್ 30ರಂದು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಸರಗಳ್ಳತನದ ಪ್ರಕರಣ ದಾಖಲಾಗಿತ್ತು. ಜಮೀನುಗಳ ಬಳಿ ಒಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಕಳ್ಳತನ ನಡೆಸಿದ್ದರು. ತಂಡವಾಗಿ ಬಂದಿದ್ದ ಆರೋಪಿಗಳು ಕ್ಷಣಾರ್ಧದಲ್ಲಿ ಮಹಿಳೆಯರ ಚಿನ್ನದ ಸರಗಳನ್ನು ಕಸಿದು ಪರಾರಿಯಾಗಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರ ನಿರ್ದೇಶನದಂತೆ ವಿಶೇಷ ತನಿಖಾ ತಂಡ ರಚಿಸಲಾಯಿತು. ತನಿಖೆ ಆರಂಭಿಸಿದ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


















