ಮನೆ ಸುದ್ದಿ ಜಾಲ ಪಹಲ್ಗಾಮ್ ದಾಳಿ : ತನಿಖೆಯಲ್ಲಿ ಸಿಕ್ಕ ಮಹತ್ವದ ಸುಳಿವು

ಪಹಲ್ಗಾಮ್ ದಾಳಿ : ತನಿಖೆಯಲ್ಲಿ ಸಿಕ್ಕ ಮಹತ್ವದ ಸುಳಿವು

0

ಶ್ರೀನಗರ (ಜೂನ್ 01): ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖ ಸುಳಿವು ಲಭ್ಯವಾಗಿದೆ. ದಾಳಿ ನಡೆಸಿದ ಉಗ್ರರು ಬಳಸಿದ್ದ ಎರಡು ಪ್ರಮುಖ ಮೊಬೈಲ್ ಫೋನ್‌ಗಳ ಮೂಲವನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿ ಒಂದು ಫೋನ್‌ಗೆ ಪಾಕಿಸ್ತಾನದ ಕರಾಚಿ ಮೂಲದ ಪ್ರಮುಖ ಬ್ಯಾಂಕ್‌ವೊಂದು ಹಣಕಾಸು ನೆರವು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ . ಈ ಕುರಿತು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ. ದಾಳಿಕೋರರ ಡಿಜಿಟಲ್ ಹೆಜ್ಜೆಗುರುತುಗಳನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭದ್ರತಾ ಪಡೆಗಳು, ಶತ್ರುಗಳ ಜಾಲವನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಕಂಡಿವೆ. ಕಳೆದ 2025ರ ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದ ಡಚಿಗಮ್ ಅರಣ್ಯ ವ್ಯಾಪ್ತಿಯ ಮುಲ್ನಾರ್ ಮಹಾದೇವ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರಾದ ಫೈಸಲ್ ಜಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿಯನ್ನು ಸೇನೆ ಹೊಡೆದುರುಳಿಸಿತ್ತು. ಇವರಿಂದ ವಶಪಡಿಸಿಕೊಳ್ಳಲಾದ ಎರಡು ಶಿಯೋಮಿ ರೆಡ್‌ಮಿ ಫೋನ್‌ಗಳ ತಪಾಸಣೆಯಿಂದ ಈ ಕೆಳಗಿನ ಸತ್ಯಗಳು ಹೊರಬಂದಿವೆ ಎನ್ನಲಾಗುತ್ತಿದೆ.

ಇದರಲ್ಲಿ ಶಿಯೋಮಿ ಗ್ಲೋಬಲ್ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ಉಗ್ರರ ಬಳಿಯಿದ್ದ ಒಂದು ‘ರೆಡ್‌ಮಿ 9T’ ಫೋನ್ ಅನ್ನು 2021ರ ಜನವರಿಯಲ್ಲಿ ಪಾಕಿಸ್ತಾನದ ‘ಟೆಕ್ ಸಿರಾಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಆಮದು ಮಾಡಿಕೊಂಡಿತ್ತು. ಈ ಆಮದಿಗೆ ಕರಾಚಿಯ ಶಹ್ರಾ-ಇ-ಫೈಸಲ್‌ನಲ್ಲಿರುವ ಪ್ರಮುಖ ಇಸ್ಲಾಮಿಕ್ ಬ್ಯಾಂಕ್ ಆದ ‘ಫೈಸಲ್ ಬ್ಯಾಂಕ್ ಲಿಮಿಟೆಡ್’ ಹಣಕಾಸು ಒದಗಿಸಿತ್ತು. ಈ ಫೋನ್ ಅನ್ನು ಕಳೆದ 2021 ರಲ್ಲಿ ಆಮದು ಮಾಡಿಕೊಂಡಿದ್ದರೂ, ಏಪ್ರಿಲ್ 22, 2025 ರಂದು ಪಹಲ್ಗಾಮ್ ದಾಳಿ ನಡೆಯುವವರೆಗೂ ಒಮ್ಮೆಯೂ ಸ್ವಿಚ್ ಆನ್ ಮಾಡಲಾಗಿರಲಿಲ್ಲ. ಅಂದರೆ, ಲಷ್ಕರ್-ತೊಯ್ಬಾ ಉಗ್ರರಿಗೆ ಹಸ್ತಾಂತರಿಸುವ ಉದ್ದೇಶದಿಂದಲೇ ಇದನ್ನು ರಹಸ್ಯವಾಗಿ ಎತ್ತಿಡಲಾಗಿತ್ತು ಎಂಬುದು ಸಾಬೀತಾಗಿದೆ. ಉಗ್ರರ ಬಳಿಯಿದ್ದ ಮತ್ತೊಂದು ‘ರೆಡ್‌ಮಿ ನೋಟ್ 12’ ಫೋನ್ ಅನ್ನು ಲಾಹೋರ್‌ನ ‘ಏರ್ ಲಿಂಕ್ ಕಮ್ಯುನಿಕೇಷನ್ಸ್’ ಸಂಸ್ಥೆ ಆಮದು ಮಾಡಿಕೊಂಡಿತ್ತು. ಇದನ್ನು ಸಹ ದಾಳಿಗೆ ಮುನ್ನ ಎಂದೂ ಆನ್ ಮಾಡಿರಲಿಲ್ಲ. ನಂತರ ಪಹಲ್ಗಾಮ್ ದಾಳಿಯಲ್ಲಿ ಈ ಬ್ಯಾಂಕ್‌ನ ನೇರ ಪಾತ್ರದ ಬಗ್ಗೆ ಪುರಾವೆಗಳಿಲ್ಲದಿದ್ದರೂ, ಜಾಗತಿಕ ಭಯೋತ್ಪಾದನಾ ನಿಧಿಯ ತನಿಖೆಗಳಲ್ಲಿ ಈ ಬ್ಯಾಂಕ್ ಹೆಸರು ಈ ಹಿಂದೆಯೂ ಕೇಳಿಬಂದಿತ್ತು.

9/11 ದಾಳಿಯ ನಂತರ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಭಾರತದ ವಿರುದ್ಧ ಹೋರಾಡುವ ಲಷ್ಕರ್-ಎ-ತೊಯ್ಬಾಮತ್ತು ಅಲ್-ಖೈದಾ ಒಡನಾಟ ಹೊಂದಿರುವ ಕುವೈತ್ ಮೂಲದ ಲಜ್ನತ್ ಅಲ್-ದವಾ ಸಂಸ್ಥೆಗಳು ಇದೇ ಫೈಸಲ್ ಬ್ಯಾಂಕ್‌ನಲ್ಲಿ ಠೇವಣಿ ಖಾತೆಗಳನ್ನು ಹೊಂದಿದ್ದವು. 2002ರ ವರದಿಗಳ ಪ್ರಕಾರ ಪಾಕಿಸ್ತಾನದ ಎಫ್‌ಐಎ ತನಿಖೆ ನಡೆಸಿದಾಗ ಜೈಶ್-ಎ-ಮೊಹಮ್ಮದ್ ಸೇರಿ ಹಲವು ನಿಷೇಧಿತ ಗುಂಪುಗಳು ಇಲ್ಲಿ ಖಾತೆ ಹೊಂದಿದ್ದು ಪತ್ತೆಯಾಗಿತ್ತು. ತನಿಖಾಧಿಕಾರಿಗಳ ಪ್ರಕಾರ, ಉಗ್ರರು ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಬಳಸದೆ, ಸುರಕ್ಷಿತವಾಗಿ ಸಂವಹನ ನಡೆಸಲು ‘ಲಾಂಗ್ ರೇಂಜ್ ರೇಡಿಯೋ ಕಮ್ಯುನಿಕೇಷನ್ ತಂತ್ರಜ್ಞಾನ’ ಬಳಸುತ್ತಿದ್ದರು. ಹೀಗಾಗಿ ಫೋನ್‌ಗಳಲ್ಲಿ ಯಾವುದೇ ಕರೆ ಡೇಟಾ ಸಿಕ್ಕಿಲ್ಲ. ಆದರೆ, ಭದ್ರತಾ ಪಡೆಗಳು ಫೋನ್‌ನಲ್ಲಿದ್ದ ಡಿಜಿಟಲ್ ದತ್ತಾಂಶಗಳನ್ನು ಯಶಸ್ವಿಯಾಗಿ ಮರುಪಡೆದಿದ್ದು ಅದರಲ್ಲಿ ಪಹಲ್ಗಾಮ್‌ನ ಬೈಸರನ್ ಕಣಿವೆಯ ನಕ್ಷೆಗಳು ಮತ್ತು ಫೋಟೋಗಳು ಲಭ್ಯವಾಗಿವೆ. ದಾಳಿಗೆ ಮುನ್ನ ಮಾರ್ಚ್ 30, 2025 ರಂದು ಉಗ್ರರು ಎತ್ತರದ ಪ್ರದೇಶದಲ್ಲಿ ಹೂಡಿದ್ದ ರಹಸ್ಯ ಟೆಂಟ್‌ನ ಫೋಟೋ ಕೂಡ ಇದರಲ್ಲಿ ಪತ್ತೆಯಾಗಿದ್ದು, ತನಿಖೆಗೆ ದೊಡ್ಡ ಶಕ್ತಿ ನೀಡಿದೆ. ಶತ್ರುಗಳ ಪ್ರತಿ ನಡೆಯನ್ನು ಭೇದಿಸುತ್ತಿರುವ ತನಿಖಾ ಸಂಸ್ಥೆಗಳ ಈ ಪ್ರಗತಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿದುಬಂದಿದೆ.