ಮನೆ ಸುದ್ದಿ ಜಾಲ ಸಲ್ಮಾನ್ ಖಾನ್  : ಕೃಷ್ಣ ಮೃಗ ಬೇಟೆ ಪ್ರಕರಣ ಚಿತ್ರತಂಡಕ್ಕೆ ನೋಟಿಸ್

ಸಲ್ಮಾನ್ ಖಾನ್  : ಕೃಷ್ಣ ಮೃಗ ಬೇಟೆ ಪ್ರಕರಣ ಚಿತ್ರತಂಡಕ್ಕೆ ನೋಟಿಸ್

0

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಡವು ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸಲ್ಮಾನ್ ಖಾನ್ ಆರೋಪಿ ಆಗಿರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ ಎನ್ನಲಾಗಿದೆ. ‘ಕಾಲಾ ಹಿರನ್’  ಚಿತ್ರದ ಎಲ್ಲಾ ರೀತಿಯ ಸಿದ್ಧತೆ ಮತ್ತು ಪ್ರಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದ್ದು ವರದಿಗಳ ಪ್ರಕಾರ, ಏಪ್ರಿಲ್ 24ರಂದು ಈ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಭರತ್ ಶ್ರೀನಾಥ್ ನಿರ್ದೇಶನದ ಹಾಗೂ ಅಮಿತ್ ಜಾನಿ ನಿರ್ಮಾಣದ ಈ ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಕ್ಷಯ್ ಪಾಂಡೆ ಅವರು ನಟರನ್ನು ಸಂಪರ್ಕಿಸುತ್ತಿದ್ದರು. ಈ ವೇಳೆ ಚಿತ್ರದ ಸಾರಾಂಶ ಮತ್ತು ಪಾತ್ರಗಳ ಸ್ಕೆಚ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಅದರಲ್ಲಿ ಸಲ್ಮಾನ್ ಖಾನ್ ಅವರ ಪ್ರಕರಣವನ್ನು ಪ್ರಸ್ತಾಪಿಸಲಾಗಿತ್ತು ಎನ್ನಲಾಗಿದೆ.

ಇದು ಸಲ್ಮಾನ್ ಖಾನ್ ಅವರ ಗಮನಕ್ಕೆ ಬಂದ ತಕ್ಷಣ ಅವರ ವಕೀಲರ ತಂಡ ಕಾನೂನು ಕ್ರಮಕ್ಕೆ ಮುಂದಾಗಿದೆ. ಸಲ್ಮಾನ್ ಖಾನ್ ಅವರ ಕಾನೂನು ತಂಡವು ನೋಟಿಸ್‌ನಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಿದೆ. ಮೊದಲನೆಯದಾಗಿ, ಕೃಷ್ಣಮೃಗ ಬೇಟೆ ಪ್ರಕರಣವು ಸದ್ಯ ರಾಜಸ್ಥಾನ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಸುತ್ತ ಸಿನಿಮಾ ಮಾಡುವುದು ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಚಿತ್ರದಲ್ಲಿ ಘಟನೆಯನ್ನು ಅತಿರಂಜಿತವಾಗಿ ಬಿಂಬಿಸುವುದರಿಂದ ಸಲ್ಮಾನ್ ಖಾನ್ ವಿರುದ್ಧ ಸಾರ್ವಜನಿಕರಲ್ಲಿ ಪೂರ್ವಾಗ್ರಹ ಮೂಡಬಹುದು ಮತ್ತು ಇದು ಅವರಿಗೆ ಸಿಗಬೇಕಾದ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಬಹುದು ಎಂದು ವಾದಿಸಲಾಗಿದೆ. ಹಾಗೂ ಎರಡನೆಯದಾಗಿ, ಈ ಚಿತ್ರವು ಸಲ್ಮಾನ್ ಖಾನ್ ಅವರ ವೈಯಕ್ತಿಕ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ. ಸಲ್ಮಾನ್ ಖಾನ್ ಅವರ ಹೆಸರು, ವ್ಯಕ್ತಿತ್ವ ಅಥವಾ ಅವರಿಗೆ ಸಂಬಂಧಿಸಿದ ಘಟನೆಗಳನ್ನು ಬಳಸಿಕೊಳ್ಳಲು ಚಿತ್ರತಂಡ ಯಾವುದೇ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆದಿಲ್ಲ. ಸಲ್ಮಾನ್ ಅವರ ಜನಪ್ರಿಯತೆ ಮತ್ತು ಘನತೆಯನ್ನು ಬಳಸಿಕೊಂಡು ಚಿತ್ರತಂಡ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ವಕೀಲರು ದೂರಿದ್ದಾರೆ.

ಇದರ ಕುರಿತ್ತಾಗಿ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಅಕ್ಷಯ್ ಪಾಂಡೆ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರ ಎಲ್ಲಾ ವ್ಯಕ್ತಿಗಳಿಗೆ ಚಿತ್ರದ ನಿರ್ಮಾಣ, ಚಿತ್ರಕಥೆ ಅಭಿವೃದ್ಧಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಜೊತೆಗೆ, ಬೇಷರತ್ ಲಿಖಿತ ಕ್ಷಮಾಪಣೆಗೆ ಒತ್ತಾಯಿಸಿದೆ. ಈ ನೋಟಿಸ್ ತಲುಪಿದ 24 ಗಂಟೆಗಳ ಒಳಗೆ ನಿಯಮಗಳನ್ನು ಪಾಲಿಸದಿದ್ದರೆ ಕೋಟ್ಯಂತರ ರೂಪಾಯಿ ನಷ್ಟ ಪರಿಹಾರ ಹಾಗೂ ಸಿವಿಲ್-ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂಬುದ್ದಾಗಿದೆ.