2026 ರ ಐಪಿಎಲ್ ಆಡಿ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ಇದೀಗ ರಾಷ್ಟ್ರೀಯ ಕರ್ತವ್ಯದತ್ತ ಗಮನಹರಿಸಲಿದ್ದಾರೆ. ಬಹಳ ದಿನಗಳ ಬಳಿಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಸರಣಿಯನ್ನು ಆಡಲು ಸಜ್ಜಾಗಿದೆ. ಅದರಂತೆ ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಇದೇ ಜೂನ್ 6 ರಿಂದ ಟೆಸ್ಟ್ ಪಂದ್ಯ ಶುರುವಾಗಬೇಕಿದೆ. ಆದಾಗ್ಯೂ ಈ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಹಿನ್ನಡೆಯುಂಟಾಗಿದೆ. ತಂಡದ ಅನುಭವಿ ಬೌಲರ್ ಮೊಹಮ್ಮದ್ ಸಿರಾಜ್ ಈ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಸಿರಾಜ್ ಪ್ರಸ್ತುತ ಗಾಯದಿಂದ ಬಳಲುತ್ತಿದ್ದು, ಚೇತರಿಕೆಗೆ ಸಮಯಬೇಕಾಗಿರುವುದರಿಂದ ಅವರು ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದು. ಐಪಿಎಲ್ 2026 ರ ಫೈನಲ್ ಸಮಯದಲ್ಲಿ ಸಿರಾಜ್ ಗಾಯಗೊಂಡಿದ್ದರು ಎನ್ನಲಾಗುತ್ತಿದೆ.

ಆದರೆ ಇದರ ಹೊರತಾಗಿಯೂ ಸಿರಾಜ್ ಫೈನಲ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರಯ. ಸಿರಾಜ್ ಬಲ ಭುಜದ ಗಾಯದಿಂದ ಬಳಲುತ್ತಿದ್ದು, ಬೌಲಿಂಗ್ ಮಾಡುವಾಗ ನೋವು ಅನುಭವಿಸುತ್ತಿದ್ದರು. ಈಗ, ನ್ಯೂ ಚಂಡೀಗಢ ಟೆಸ್ಟ್ನಲ್ಲಿ ಸಿರಾಜ್ ಭಾಗವಹಿಸುವುದು ಅನುಮಾನ ಎಂಬ ವರದಿಯಾಗಿದೆ. ಆದಾಗ್ಯೂ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಸಿರಾಜ್ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಆ ಪರೀಕ್ಷೆಯಲ್ಲಿ ಸಿರಾಜ್ ಪಾಸಾದರೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಸಿರಾಜ್ ಆಡಲು ಅನರ್ಹ ಎಂಬ ಫಲಿತಾಂಶ ಬಂದರೆ, ಅವರ ಬದಲಿಗೆ ವೇಗದ ಬೌಲರ್ ಗುರ್ನೂರ್ ಬ್ರಾರ್ ತಂಡದಲ್ಲಿ ಆಡಬಹುದು ಎಂಬ ವರದಿಗಳಿವೆ. ಪಂಜಾಬ್ನ ಗುರ್ನೂರ್ ಬ್ರಾರ್ ದೇಶೀಯ ಕ್ರಿಕೆಟ್ನಲ್ಲಿ ಸರಾಸರಿ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ.

ಬ್ರಾರ್ ಪಂಜಾಬ್ ಪರ ಇದುವರೆಗೆ 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 52 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಒಂದು ಇನ್ನಿಂಗ್ಸ್ನಲ್ಲಿ ಒಮ್ಮೆ ಐದು ವಿಕೆಟ್ಗಳನ್ನು ಮತ್ತು ಮೂರು ಬಾರಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ. ಬ್ರಾರ್ 2025-26 ರ ರಣಜಿ ಟ್ರೋಫಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ. ಗಾಯದ ಕಾರಣದಿಂದಾಗಿ ಮೊಹಮ್ಮದ್ ಸಿರಾಜ್ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ, ಅವರ ಸ್ಥಾನವನ್ನು ತುಂಬುವ ಅವಕಾಶ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿಗೂ ಇದೆ. ಕಳೆದ ರಣಜಿ ಟ್ರೋಫಿಯಲ್ಲಿ 60 ವಿಕೆಟ್ ಉರುಳಿಸಿದ್ದ ನಬಿ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇದರ ಹೊರತಾಗಿಯೂ, ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ ಮಂಗಳವಾರ ಅವರನ್ನು ಮೀಸಲು ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅವರಿಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
















